ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಿಜಕ್ಕೂ ಕೆಟ್ಟ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿನ ಉಗ್ರರ ದಾಳಿ ಇಡೀ ಪ್ರಪಂಚಕ್ಕೆ ದೊಡ್ಡ ಆಘಾತ. ಈ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಉಗ್ರರು ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಸದೆಬಡಿಯಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜಾಗೃತವಾಗಿ ಕೆಲಸ ಮಾಡಬೇಕಿದೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಭಯೋತ್ಪಾದಕರನ್ನು ಸದೆಬಡಿಯಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಬುಡಸಮೇತ ಕಿತ್ತು ಹಾಕಬೇಕು. ಕೂಡಲೇ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.





