Mysore
21
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬೆಂಗಳೂರಲ್ಲಿ ಭಯಾನಕ ಹತ್ಯೆ: 30 ತುಂಡಾಗಿ ಕತ್ತರಿಸಿ ಮಹಿಳೆ ಕೊಲೆ: ಫ್ರಿಡ್ಜ್‌ನಲ್ಲಿ ಮೃತದೇಹ ಬಚ್ಚಿಟ್ಟ ಆರೋಪಿ!

ಬೆಂಗಳೂರು: 2022ರಲ್ಲಿ ದೆಹಲಿಯ ಶ್ರದ್ಧಾ ಹತ್ಯೆ ಕೇಸ್‌ ಇಡೀ ದೇಶವನ್ನೇ ದಂಗು ಬಡಿಸಿತ್ತು. ಗೆಳತಿಯ ಹತ್ಯೆ ಮಾಡಿ ದೇಹ ಪೀಸ್‌ ಪೀಸ್‌ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಪಾಪಿಯ ಕ್ರೂರತೆ ಕಂಡು ಜನ ಅಕ್ಷರಶಃ ದಂಗಾಗಿದ್ದರು. ಆದರೆ, ಇದೀಗ ಬೆಂಗಳೂರಿನಲ್ಲೇ ದೆಹಲಿ ಮಾದರಿ ಹತ್ಯೆ ನಡೆದಿರೋದು ಸಿಲಿಕಾನ್‌ ಸಿಟಿ ಮಂದಿಯನ್ನು ಬೆಚ್ಚಿ ಬೀಳಿಸಿದೆ.

ದೆಹಲಿಯ ಶ್ರದ್ಧಾ ಮಾದರಿಯಲ್ಲೇ ಬೆಂಗಳೂರಲ್ಲಿ ಹತ್ಯೆ
ಬೆಂಗಳೂರಿನ ಮಲ್ಲೇಶ್ವರದ ಪೈಪ್‌ಲೈನ್‌ನ ಕೆ.ವಿ ರಸ್ತೆಯ ಬಾಡಿಗೆ ಮನೆಯಲಿ ನೆಲೆಸಿದ್ದ ಮಹಿಳೆಯೊಬ್ಬರನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ, ಅವರ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ತಡವಾಗಿ ಪತ್ತೆಯಾಗಿದೆ.

ಮಹಿಳೆ ದೇಹ 32 ಪೀಸ್‌..
ಮಹಾಲಕ್ಷ್ಮಿ(29)ಕೊಲೆಯಾದವರು. ಒಂದಲ್ಲ, ಎರಡಲ್ಲ ಬರೋಬ್ಬರಿ ಮಹಿಳೆ ದೇಹವನ್ನು 32ಪೀಸ್‌ ಮಾಡಿರೋ ಮಾಹಿತಿ ಸಿಕ್ಕಿದೆ. 165ಲೀಟರ್‌ ಫೀಡ್ಜ್‌ನಲ್ಲಿ ಮಹಿಳೆ ಮೃತದೇಹವನ್ನು ತುಂಡು ತುಂಡು ಮಾಡಿ ಇಟ್ಟಿರುವ ದೃಶ್ಯ ಕಂಡು ಪೊಲೀಸರು ಕೂಡ ಶಾಕ್‌ ಆಗಿದ್ದಾರೆ.

ಮಹಿಳೆಯನ್ನು ಉಲ್ಟಾ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಆರೋಪಿ…
ಮೃತದೇಹವನ್ನು ಪ್ರತ್ಯೇಕವಾಗಿಸಿ ಫ್ರಿಡ್ಜ್‌ನಲ್ಲಿ ತುಂಬಿದ್ದ ಆರೋಪಿ ಫ್ರಿಡ್ಜ್‌ ಆನ್‌ ಮಾಡಿದ್ದ. ಫಿಡ್ಜ್‌ನಲ್ಲಿ ಮೃತದೇಹ ಇಟ್ಟು ಹೋಗಿದ್ದಾನೆ. ಮುಖವನ್ನು ಸಹ ಹೊರಗೆ ಕಾಣಿಸದಂತೆ  ತಿರುಗಿಸಿ ಇಟ್ಟಿದ್ದ ಎನ್ನಲಾಗಿದೆ.

ಕೊಲೆಯಾದ ಮಹಿಳೆ ಮಹಾಲಕ್ಷಿ ಅವರ ಪೋಷಕರು ನೇಪಾಳದವರು. 30 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ನೆಲಮಂಗಲದಲ್ಲಿ ವಾಸಿಸುತ್ತಿದ್ದು. ಮಹಾಲಕ್ಷ್ಮಿ ಅವರನ್ನು ಪಶ್ಚಿಮ ಬಂಗಾಳದ ಹೇಮಂತ್‌ದಾಸ್‌ ಅವರಿಗೆ ಐದು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಇತ್ತೀಚೆಗೆ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿ ಪತಿಯಿಂದ ಮಹಾಲಕ್ಷ್ಮೀ ಪ್ರತ್ಯೇಕವಾಗಿ ಪೈಪ್‌ಲೈನ್‌ ಕೆ.ವಿ ರಸ್ತೆಯ ನಾಲ್ಕು ಅಂತಸ್ತಿನ ಕಟ್ಟಡದ ಒಂದನೇ ಮಹಡಿಯಲ್ಲಿ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಮನೆಯಲ್ಲಿ ಒಬ್ಬರೇ ಇದ್ದು. ಮಗು ಅಜ್ಜಿ ಜೊತೆಗಿತ್ತು. ದಂಪತಿ ವಿಚ್ಛೇಧನ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯ ವಿಚಾರಣೆ ನಡೆಸಿದ ಪೊಲೀಸರು ಪ್ರತ್ಯೇಕವಾಗಿ ವಾಸಿಸಲು ಕಾರಣ ಏನು ಎಂಬುದನ್ನು ಮಾಹಿತಿ ಪಡೆದಿದ್ದಾರೆ.

ಬೈಕ್‌ನಲ್ಲಿ ಬಂದು ಹೋಗಿತ್ತಿದ್ದ ಯುವಕ..!
ಕೊಲೆಯಾದ ಮಹಿಳೆ ಮಹಾಲಕ್ಷ್ಮಿ ಗಾರ್ಮೆಂಟ್ಸ್‌ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆ ಬಳಿಗೆ ಪ್ರತಿನಿತ್ಯ ಯುವಕನೊಬ್ಬ ಬೈಕ್‌ನಲ್ಲಿ ಬಂದು ಹೋಗುತ್ತಿದ್ದು. ಆತನೇ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಯುವಕನ ಮೊಬೈಲ್‌ ಸಂಖ್ಯೆ ಪತ್ತೆಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳೂ ತಿಳಿಸಿವೆ.

ಆರೋಪಿ ಪತ್ತೆಗೆ ಪೋಲಿಸರ ಶೋಧ
ಪ್ರಕರಣ ದಾಖಲಿಸಿಕೊಂಡ ವೈಯಾಲಿಕಾವಲ್‌ ಠಾಣೆ ಪೊಲೀಸರು ಪರಾರಿಯಾಗಿರುವ ಆರೋಪಿ ಪತ್ತೆಗೆ ಎಂಟು ತಂಡ ರಚಿಸಿಕೊಂಡು ಶೋಧ ಆರಂಭಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಬೆರಳಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನದಳ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

Tags: