ಬೆಂಗಳೂರು : ಬೆಂಗಳೂರು ತುಮಕೂರು ಮೆಟ್ರೋ ಸಂಪರ್ಕ ಒಂದು ಸ್ಟುಪಿಡ್ ಐಡಿಯಾ ( ಮೂರ್ಖತನದ ಯೋಜನೆ ) ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆಕ್ಷೇಪಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಯೋಜನೆಯನ್ನು ವಿರೋಧಿಸಲು ಕಾರಣವೇನು ಎಂಬುದನ್ನೂ ತಿಳಿಸಿದ್ದಾರೆ.
ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದ್ದು. ಅದರ ಬದಲಾಗಿ ಅವರು ಬದಲಾಗಿ ಅವರು ಬೆಂಗಳೂರಿನಲ್ಲಿ ಬಾಕಿ ಇರುವ ಮೆಟ್ರೋ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸತರಿಸುವತ್ತ ಗಮನಹರಿಸಬೇಕು. ಮೆಟ್ರೋ ಎಂಬುದು ನಗರದೊಳಗಿನ ಸಂಪರ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದು. ತುಮಕೂರಿಗೆ ಆರ್ ಆರ್‍ಟಿಎಸ್ ಅಥವಾ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲ್) ಒದಗಿಸಬೇಕು ಎಂದು ಉಲ್ಲೇಖಿಸಿದ್ದಾರೆ.
ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಬೇಡ ;
ತುಮಕೂರಿಗೆ ಮೆಟ್ರೋ ವಿಸ್ತರಿಸುವ ಯೋಜನೆಗೆ ಮತ್ತೊಬ್ಬ ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಮೆಟ್ರೋ ಎಂದರೇನು, ಸಬ್ ಅರ್ಬನ್, ಇಂಟರ್? ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದು’ ಎಂದು ಅವರು ಉಲ್ಲೇಖಿಸಿದ್ದಾರೆ.
ನಮ್ಮ ಅವಧಿಯಲ್ಲೇ ಮೆಟ್ರೋ
ಒಂದೆಡೆ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಹಾಗೂ ಭಾಸ್ಕರ್ ರಾವ್ ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ ಮತ್ತೊಂದೆಡೆ, ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, `ನಮ್ಮ ಅವಧಿಯಲ್ಲೇ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ದೊರೆಯಲಿದೆ ಎಂದಿದ್ದಾರೆ.
ತುಮಕೂರಿಗೆ ಮೆಟ್ರೋ ಯೋಜನೆ ವಿಸ್ತರಣೆ ಸಂಬಂಧ ಬಿಎಂಆರ್ಸಿಎಲ್ ಈಗಾಗಲೇ ವರದಿ ಕೊಟ್ಟಿದೆ. ನಮ್ಮ ಅವಧಿಯಲ್ಲೇ ಇದನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ. ತುಮಕೂರಿನ ಜನರಿಗೆ ಕೇಂದ್ರದ ಎಲ್ಲಾ ಸೌಲಭ್ಯಗಳು ಸಿಗಬೇಕು. ಇನ್ನೊಂದು ತಿಂಗಳಲ್ಲಿ ತುಮಕೂರು ಜನರಿಗೆ ದೊಡ್ಡ ಸುದ್ದಿ ಕೊಡುತ್ತೇವೆ. ಅದು ಇಡೀ ತುಮಕೂರಿನ ಚಿತ್ರಣವನ್ನೆ ಬದಲಾವಣೆ ಮಾಡಲಿದೆ. ತುಮಕೂರು ನಗರ ಬೆಂಗಳೂರಿನ 2ನೇ ನಗರವಾಗಿ ಬೆಳೆಯುವುದು ಖಂಡಿತಾ ಎಂದು ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್‍ಸಿಎಲ್ ಸಲ್ಲಿಕೆ ಮಾಡಿದೆ.





