ಬೆಂಗಳೂರು: ಟ್ಯಾಟೂನಿಂದ ಎಚ್‌ಐವಿ ಹಾಗೂ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕಾನೂನು ರೂಪಿಸಲು ಚಿಂತನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು (ಫೆ.28) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ಯಾಟೂನಿಂದ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಇದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿಯಮ ರೂಪಿಸುವ ಅವಕಾಶ ಕೂಡ ಇದೆ ಎಂದರು.
ಟ್ಯಾಟೂ ಇಂಕ್ ಕಾಂತಿ ವರ್ಧಕಗಳ ಅಡಿಯಲ್ಲಿ ತರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಆಯುಕ್ತರಿಗೆ ಪತ್ರ ಬರೆದು ಮನವಿಗೆ ಸೂಚಿಸಲಾಗಿದೆ. ಹೀಗಾಗಿ ಪತ್ರ ಬರೆದು ಕಾನೂನು ರೂಪಿಸಲು ಮುಂದಾಗಿದ್ದೇವೆ ಎಂದರು.
ಈವರೆಗೆ 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ. ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಕೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.
ಹಾಗೆಯೇ 1133 ಔಷಧ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 938 ಔಷಧಗಳು ಗುಣಮಟ್ಟ ಹೊಂದಿವೆ ಎಂದು ತಿಳಿಸಿದರು.





