ಕಾರವಾರ : ರಾಜ್ಯದಲ್ಲಿ ಈ ಬಾರಿ 82 ಲಕ್ಷ ಹೆಕ್ಟರ್ ನಲ್ಲಿ ಬಿತ್ತನೆ ಮಾಡುವ ಗುರಿ ಇದ್ದು, ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಸಚಿವ ಎನ್. ಚಲವರಾಯ ಸ್ವಾಮಿ ತಿಳಿಸಿದರು.
ಮಂಗಳವಾರ ಹಳಿಯಾಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ 153 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದ್ದು, ಈ ಬಾರಿ ಕೂಡಾ ನಿಗಧಿತ ಗುರಿ ಸಾಧಿಸಲಾಗುವುದು. ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು ಈಗಾಗಲೇ ಶೇ. 25 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಜುಲೈ ವೇಳೆಗೆ ಬಿತ್ತನೆ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ಯಾವುದೇ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಕಂಡುಬoದಿಲ್ಲ, ಹೆಚ್ಚುವರಿ ಅಗತ್ಯತೆ ಕಂಡುಬoದಲ್ಲಿ ತಕ್ಷಣ ಪೂರೈಕೆ ಮಾಡಲಾಗುವುದು. ಪ್ರಸ್ತುತ 2.89 ಲಕ್ಷ ಮೆಟ್ರಿಕ್ ಟನ್ ಭಿತ್ತನೆ ಬೀಜ ಮತ್ತು 9.79 ಲಕ್ಷ ಟನ್ ರಸಗೊಬ್ಬರದ ದಾಸ್ತಾನು ಲಭ್ಯವಿದ್ದು ಮುಂಗಾರು ಹಂಗಾಮಿಗೆ ಅಗತ್ಯವಿರುವ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ : NEET : ಕೆಇಎಯಿಂದ ಸೀಟಿ ಹಂಚಿಕೆ ; ದಲ್ಲಾಳಿಗಳ ಮೋಸಕ್ಕೆ ಬಲಿಯಾಗದಂತೆ ಮನವಿ
ರಾಜ್ಯದ ಎಲ್ಲಾ ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸುವಂತೆ ತಿಳಿಸಿದ ಸಚಿವರು, ವಿಮಾ ಮೊತ್ತದ ಶೇ. 2 ರಷ್ಟು ಮಾತ್ರ ರೈತರು ಪಾವತಿಸಬೇಕು ಬಾಕಿ ಮೊತ್ತವನ್ನು ಸರ್ಕಾರ ಪಾವತಿಸಲಿದ್ದು, ವಿಮಾ ಪರಿಹಾರದ ಸಂಪೂರ್ಣ ಮೊತ್ತ ರೈತರಿಗೆ ದೊರೆಯಲಿದೆ ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಉಪಸ್ಥಿತರಿದ್ದರು.





