ದಾವಣಗೆರೆ: ಚುನಾವಣೆಯಲ್ಲಿ ಸೋತಾಗ ಇವಿಎಂ ಸರಿಯಿಲ್ಲ ಎನ್ನುವುದು ವಿರೋಧ ಪಕ್ಷದ ನಾಯಕರಿಗೆ ಫ್ಯಾಷನ್ ಆಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ದೇಶದ ಬಗ್ಗೆ ಕಾಳಜಿ ಇದೆ. ಯಾರು ದೇಶ ಕಟ್ಟುವಲ್ಲಿ ನಿರತರಾಗಿರುತ್ತಾರೋ, ಅಂತವರಿಗೆ ಜನತೆ ಬೆಂಬಲ ನೀಡುತ್ತಾರೆ ಎಂಬುದು ದೆಹಲಿಯ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ತಿಳಿಸಿದರು.
ದೇಶದ ಹಿತ ಮರೆತು ವಿದೇಶದಲ್ಲಿ ಮಾತನಾಡುವವರು ಚುನಾವಣೆಯಲ್ಲಿ ಸೋತಾಗ, ತಮ್ಮ ಸೋಲನ್ನು ಒಪ್ಪಿಕೊಳ್ಳದವರು ಇವಿಎಂ ಲೋಪದೋಷದ ಬಗ್ಗೆ ಮಾತನಾಡುತ್ತಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.
ರಾಜ್ಯ ಬಿಜೆಪಿಯ ಗೊಂದಲ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಹೈಕಮಾಂಡ್ ಬಹಳ ಗಟ್ಟಿ ಇದೆ. ಚುನಾವಣೆಯ ನಂತರ ರಾಷ್ಟ್ರ ನಾಯಕರು ಪಕ್ಷ ಸಂಘಟನೆಗೆ ಸಮಯ ನೀಡುತ್ತಾರೆ. ಆ ವೇಳೆ ಕರ್ನಾಟಕದ ಬಿಜೆಪಿ ನಾಯಕರ ಗೊಂದಲ ಸುಖಾಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ. ಸೋಮಣ್ಣ ಅವರ ಹೆಸರನ್ನು ಸೂಚಿಸಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಯಾರ ಹೆಸರನ್ನು ಸೂಚಿಸಿಲ್ಲ. ಏನೇ ಇದ್ದರೂ ಈ ಸ್ಥಾನದ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.





