ರಾಮನಗರ: ದೇವೇಗೌಡರ ಕುಟುಂಬದ ಮೇಲಿನ ಒಕ್ಕಲಿಗರ ಪ್ರೀತಿಯನ್ನು ಕಿತ್ತು ಹಾಕಲು ಹತ್ತು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ರಾಮನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯ ಸೋಲಿನ ಹೊಣೆ ಕಾರ್ಯಕರ್ತರು, ಮುಖಂಡರದ್ದಲ್ಲ. ಈ ಸೋಲಿನ ಜವಾಬ್ದಾರಿಯನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ನಮ್ಮನ್ನು ಟೂರಿಂಗ್ ಟಾಕೀಸ್ ಅಂತಾರೆ. ರಾಜ್ಯದಲ್ಲಿ ಯಾವುದೇ ಕಡೆ ನಿಂತು ಗೆದ್ದು ಬರುವ ಶಕ್ತಿ ಇದ್ರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಈ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಅನಿರೀಕ್ಷಿತ. ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಈಗ ಯಾವುದೋ ಸಿದ್ದರಾಮೋತ್ಸವ ಮಾಡ್ತಾರಂತೆ. ಯಾವ ಉದ್ದೇಶಕ್ಕೆ ಮಾಡ್ತಿದ್ದೀರಿ. ಏನು ಸಂದೇಶ ಕೊಡೋಕೆ ಅಹಿಂದ ಸಮಾವೇಶ ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಇನ್ನು ನಾನು ಮಂಡ್ಯದಲ್ಲಿ ಗೆಲ್ಲಲು ಒಕ್ಕಲಿಗ ಸಮುದಾಯ ಕಾರಣ. ದೇವೇಗೌಡರ ಕುಟುಂಬದ ಮೇಲಿನ ಒಕ್ಕಲಿಗರ ಪ್ರೀತಿ ಕಿತ್ತು ಹಾಕಲು ಇನ್ನೂ ಹತ್ತು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.