ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಯನ ಸಭಾಂಗಣದಲ್ಲಿ ಬುಧವಾರ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಅಂಕಿ ಅಂಶಗಳ ಕ್ರೋಢೀಕರಣ ನಡೆಯುತ್ತಿದ್ದು, ವರದಿ ಶೀಘ್ರ ಸಲ್ಲಿಸಲಿದ್ದಾರೆ. ಈ ವರದಿಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸರ್ಕಾರದ ಯೋಜನೆ ತಲುಪಿಸಲು ಸಾಧ್ಯವಾಗಲಿದೆ ಎಂದರು.
ಅಲ್ಲದೆ, ಕೆಲವರು ಯಾವುದೇ ಮಾಹಿತಿ ಕೇಳಿದರೂ ನಮ್ಮ ಸಮುದಾಯವರು ಅಷ್ಟಿದ್ದಾರೆ. ಇಷ್ಟಿದ್ದಾರೆ ಅನ್ನುತ್ತಾರೆ. ವರದಿಯಿಂದ ವಾಸ್ತವ ಅಂಶ ಗೊತ್ತಾಗಲಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಬಗ್ಗೆ ಮುಖ್ಯಮಂತ್ರಿಗಳು ವಿಶೇಷ ಕಾಳಜಿ ಹೊಂದಿದ್ದಾರೆ. ಈ ಹಿಂದಿನ ಸರ್ಕಾರಗಳು ನಿಗಮಕ್ಕೆ ಮೊದಲು ಐದು ಕೋಟಿಯಷ್ಟೇ ಅನುದಾನ ನೀಡುತ್ತಿದ್ದರು. ಕಳೆದ ವರ್ಷ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಾಗ, ಅದಕ್ಕೆ ಸ್ಪಂದಿಸಿ ಇಲಾಖೆಯ ಎಲ್ಲಾ ನಿಗಮಗಳಿಗೆ ರೂ.1600 ಕೋಟಿ ಅನುದಾನ ಒದಗಿಸಿದ್ದರು. ಈ ಪೈಕಿ ರೂ. 23.24 ಕೋಟಿ ಅನುದಾನವನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಅಲ್ಲದೆ, ಗಂಗಾ ಕಲ್ಯಾಣ ಯೋಜನೆಯಡಿ ನೀಡುತ್ತಿದ್ದ ಘಟಕದ ವೆಚ್ಚವನ್ನು ರೂ. 2.50 ಲಕ್ಷದಿಂದ ರೂ. 3.75ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಹಿಂದಿನ ಸರ್ಕಾರ ಮೂರುವರೆ ವರ್ಷದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ನಾನು ಇಲಾಖೆ ಸಚಿವನಾದ ಬಳಿಕ 18 ಸಾವಿರ ಕೊಳವೆ ಬಾವಿ ಕೊರೆಸಲಾಗಿದೆ. ಇನ್ನು ಹಿಂದುಳಿದ ವರ್ಗಗಳ ಮಕ್ಕಳ ವಿದೇಶ ವ್ಯಾಸಂಗಕ್ಕೆ ರೂ. 20 ಲಕ್ಷ ಸಾಲ ನೀಡಲಾಗುತ್ತಿತ್ತು. ನಾವು ಆ ಮೊತ್ತವನ್ನು ಶೂನ್ಯ ಬಡ್ಡಿದರಲ್ಲಿ ರೂ.50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೂಲಿ ಸಮಾಜ, ಗಂಗಾಮತಸ್ಥ ಸಮಾಜದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವ ಕೆಲಸ ಆಗಬೇಕು. ಯಾವ ಜಿಲ್ಲೆಯಲ್ಲಿ ಜಯಂತಿ ಆಚರಣೆ ಮಾಡುತ್ತಿಲ್ಲ ಎಂದು ಹೇಳಿದರೆ ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ವೇದಿಕೆಯಲ್ಲಿದ್ದ ಸಮಾಜದ ಮುಖಂಡರಿಗೆ ಸಚಿವರು ಭರವಸೆ ನೀಡಿದರು.
ಮಹಾನ್ ನಿಷ್ಠುರ ಮಾನವತಾವಾದಿ ಚೌಡಯ್ಯ:
ಹನ್ನೆರಡನೆಯ ಶತಮಾನದ ಬಸವಣ್ಣನವರ ವಚನ ಚಳುವಳಿ ಹುಟ್ಟುಹಾಕಿದ ಹಲವಾರು ಪ್ರತಿಭೆಗಳಲ್ಲಿ ಅಂಬಿಗರ ಚೌಡಯ್ಯನವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ತಮ್ಮ ವಚನಗಳಲ್ಲಿ ವೈಚಾರಿಕ ನಿರೂಪಣೆಯ ಧಾರೆಯನ್ನು ಹರಿಸುವ ಮೂಲಕ ನಿಷ್ಠುರ ಮಾನವತಾವಾದಿ ಎಂದೇ ಹೆಸರಾಗಿದ್ದವರು ಎಂದರು.
ಶೋಷಣೆಗೆ ಒಳಗಾಗಿದ್ದ ಪರಿಸರದಲ್ಲಿ ಹುಟ್ಟಿ ಬೆಳೆದ ಚೌಡಯ್ಯನವರು ತಮ್ಮ ಸಮುದಾಯದ ಬದಲಾವಣೆಯತ್ತ ಗಮನ ಹರಿಸಿದ್ದರು. ಶರಣರು ತಮ್ಮ ದಿಟ್ಟತನದಿಂದ ಗುರುತಿಸಿಕೊಂಡವರು. ಸಮಾಜದಲ್ಲಿನ ದುರ್ಗಣಗಳ ಕುರಿತು ನಿರ್ದಾಕ್ಷಿಣ್ಯವಾಗಿ ಹಲವು ಅಂಶಗಳನ್ನು ಅವರು ಖಂಡಿಸಿದ್ದಾರೆ. ಧಾರ್ಮಿಕ ಹೆಸರಿನಲ್ಲಿ ನಡೆಯುವ ಮಳಸ, ವಂಚನೆ, ಲಿಂಗಬೇಧ, ತಾರತಮ್ಯಗಳನ್ನು ಅವರು ಖಂಡಿಸಿದ್ದರು ಎಂದು ನೆನೆದರು.
ಬೆಂಗಳೂರಿನಲ್ಲೇ ಪ್ರತಿಮೆ ನಿರ್ಮಾಣ
ಬೆಂಗಳೂರಿನಲ್ಲಿ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕಾಗಿ ಈಗಾಗಲೇ ಸ್ಥಳ ಹುಡುಕಾಟ ನಡೆಸಿದ್ದೇವೆ. ಸ್ಥಳ ಗುರುತಿಸಿದ ಬಳಿಕ ಇಲಾಖೆ ವತಿಯಿಂದ ಪ್ರತಿಮೆ ನಿರ್ಮಾಣವನ್ನು ಬೆಂಗಳೂರಿನಲ್ಲಿ ಮಾಡಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರೂ ಆದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ರೇಷ್ಮೆ ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗಂಗಾಧರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮಾನಸ, ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕಿ ಕೆ.ಎಂ.ಗಾಯಿತ್ರಿ, , ಪ್ರಾಧ್ಯಾಪಕ ಡಾ.ಸ್ವಾಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




