ಹಾಸನ: ಜೆಡಿಎಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಜೆಡಿಎಸ್ ಎಂಎಲ್‌ಸಿ ಡಾ.ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಸೂರಜ್ ರೇವಣ್ಣ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ.
ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವವರು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೂರಜ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತನ ಮೇಲೆ ಶಿವಕುಮಾರ್ ದೂರು ಕೊಟ್ಟಿದ್ದರು.
ಹಣಕ್ಕಾಗಿ ಬೇಡಿಕೆ ಇಟ್ಟಿದ್ದ, ಹಣ ಕೊಡದ ಕಾರಣ ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತ ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಶಿವಕುಮಾರ್ ದೂರು ಕೊಟ್ಟಿದ್ದರು. ಈಗ ಅದೇ ಶಿವಕುಮಾರ್, ಸೂರಜ್ ರೇವಣ್ಣ ವಿರುದ್ಧವೇ ದೂರು ಕೊಟ್ಟಿದ್ದು, ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ.
ಸೂರಜ್ ರೇವಣ್ಣ ನನ್ನನ್ನು ಬೆದರಿಸಿ ಸಂತ್ರಸ್ತನ ವಿರುದ್ಧ ದೂರು ಕೊಡಿಸಲಾಗಿತ್ತು ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಅಲ್ಲದೇ ಸೂರಜ್ ರೇವಣ್ಣ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಶಿವಕುಮಾರ್ ಹೇಳಿಕೆಗಳನ್ನೆಲ್ಲಾ ಪೊಲೀಸರು ದಾಖಲಿಸಿಕೊಂಡಿದ್ದು, ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.