Mysore
20
overcast clouds
Light
Dark

ಬರ ಪರಿಹಾರಕ್ಕೆ ಸಮ್ಮತಿಸಿದ ಸುಪ್ರೀಂ : ಇದು ಮೊದಲ ಹಂತದ ಜಯ ಎಂದ ಕಾಂಗ್ರೆಸ್‌ !

ಬೆಂಗಳೂರು: ರಾಜ್ಯಕ್ಕೆ ಬರಬೇಕಿದ್ದ ಬರ ಪರಿಹಾರ ವಿಷಯದಲ್ಲಿ ಸುಪ್ರೀಂ ಮಧ್ಯಸ್ಥಿಕೆವಹಿಸಿ ರಾಜ್ಯದ ರೈತರಿಗೆ ನ್ಯಾಯ ದೊರಕಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಸಚಿವರು ಹಾಗೂ ರಾಜ್ಯ ಕಾಂಗ್ರೆಸ್‌ ಘಟಕ ಸ್ವಾಗತಿಸಿದೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪರಿಹಾರ ವಿಳಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆಗೆ ಧನ್ಯವಾದ ಹೇಳಿದ್ದಾರೆ. 2023ರ ಸೆಪ್ಟಂಬರ್‌ ತಿಂಗಳಿನಲ್ಲಿ ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಬರ ಪರಿಹಾರ ನೀಡದ ಕೇಂದ್ರದ ನಿಲುವಿನ ಬಗ್ಗೆ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು. ಇದೊಂದು ಮೈಲಿಗಲ್ಲು. ನ್ಯಾಯ ರಕ್ಷಣೆ ಹಾಗೂ ರಾಜ್ಯದ ಜನರ ಬರ ಪರಿಹಾರಕ್ಕಾಗಿ ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಈ ಕುರಿತು ರಾಮನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಒಕ್ಕೂಟದ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದ ಡಿ.ಕೆ ಸುರೇಶ್‌ ಅವರು ಧ್ವನಿ ಎತ್ತಿದ್ದರು. ನಾವೆಲ್ಲರೂ ಸೇರಿ ನಡೆಸಿದ ಹೋರಾಟದಿಂದಾಗಿ ನಮಗೆ ನ್ಯಾಯ ಸಿಕ್ಕಿದೆ. ನಮ್ಮ ಪಾಲಿನ ಹಣ ನಮಗೆ ಸಿಗಬೇಕು ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್‌ ಘಟಕ ತನ್ನ ಎಕ್ಸ್‌ ಖಾತೆಯಲ್ಲಿ ಪೊಸ್ಟ್‌ ಮಾಡಿ, ಬರ ಪರಿಹಾರದ ವಿಚಾರವಾಗಿ ಸುಪ್ರೀಂ ಕೋರ್ಟಿನಲ್ಲಿ ಕರ್ನಾಟಕಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಒಂದು ವಾರದೊಳಗೆ ಕರ್ನಾಟಕಕ್ಕೆ ಬರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಕೇಂದ್ರ ಸರ್ಕಾರ ಒಪ್ಪಿದೆ, ಇದು ಸ್ವಾಗತರ್ಹ ಎಂದಿದೆ.

ಚುನಾವಣಾ ಭಾಷಣದಲ್ಲಿ ಸುಳ್ಳು ಹೇಳುವ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಬಾಲ ಮುದುರಿ ಒಪ್ಪಿಕೊಂಡಿದೆ. ಕನ್ನಡಿಗರ ಹಿತ ಕಾಯುವ ದೃಷ್ಟಿಯಿಂದ ಕೋರ್ಟ್ ಮೆಟ್ಟಿಲೇರುವ ಕರ್ನಾಟಕ ಸರ್ಕಾರದ ದಿಟ್ಟ ನಿರ್ಧಾರದಿಂದ ಕನ್ನಡದ ರೈತರಲ್ಲಿ ಆಶಾಭಾವನೆ ಮೂಡುವಂತಾಗಿದೆ. ಈ ಹೋರಾಟದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಜೊತೆ ಕೈಜೋಡಿಸಿ ಬೆಂಬಲವಾಗಿ ನಿಂತ ರಾಜ್ಯದ ರೈತರು ಹಾಗೂ ಪ್ರಜ್ಞಾವಂತ ಜನತೆಗೆ ಧನ್ಯವಾದಗಳನ್ನು ತಿಳಿಸಿದೆ.

ಇನ್ನೂ ಸಚಿವ ಸಂಪುಟದ ಹಲವಾರು ನಾಯಕರು ಕನ್ನಡದ ರೈತರ ಹಿತ ಕಾಯುವ ನಮ್ಮ ಬದ್ಧತೆಗೆ ಗೆಲುವು ಸಿಕ್ಕಿದೆ ಎಂದಿದ್ದಾರೆ.