ಮೈಸೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲ. ಈಗ ಕೇವಲ ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದೇನೆ. ಟೆಕ್ನಿಕಲಿ ನಾನು ಬಿಜೆಪಿ ಸದಸ್ಯನಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮ ಮನೆ ಕಾಂಗ್ರೆಸ್, ಆದರೆ ಸುಮ್ಮನೆ ಬಿಜೆಪಿಯಲ್ಲಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ನೇರವಾಗಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದೂ ನಿಜ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನನ್ನು ಔತಣ ಕೂಟಕ್ಕೆ ಕರೆದಿದ್ದರೂ. ಆದರೆ ಸಭೆಗೆ ಅಲ್ಲ. ಔತಣಕೂಟ ನಡೆಯುವ ಸ್ಥಳದ ಬದಲಾಗಿ ತಿಳಿಯದೆ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಹೋದೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಬನ್ನಿ ಎಂದು ಕರೆದಿದ್ದ ಕಾರಣ ಸಭೆಯಲ್ಲಿ ಕೂತಿದ್ದೆ. ನಂತರ ನಾನು ಊಟಕ್ಕೆ ತೆರಳಿದೆ. ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನು ಹಾಬೇಕು ಎಂದು ಚರ್ಚೆ ನಡೆಸಿದರು ಎಂದು ತಿಳಿಸಿದರು.





