ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಸದ್ಯ ಆರೋಪಿ ಸ್ಥಾನದಲ್ಲಿದ್ದಾರೆ. ಜೈಲಿನಲ್ಲಿರುವ ಉಳಿದವರನ್ನು ಬಿಟ್ಟು ದರ್ಶನ್‌ರನ್ನೇ ಹೈಲೆಟ್ ಮಾಡಲಾಗುತ್ತಿದೆ ಎಂದರು.
ನಾವೆಲ್ಲಾ ಈ ವಿಚಾರದಲ್ಲಿ ವಿವೇಚನೆ ಇಟ್ಟುಕೊಂಡು ಮಾತನಾಡೋಣ. ಜೈಲಿನಲ್ಲಿ ಇರುವುದೇ ಕ್ರಿಮಿನಲ್ಸ್ ಅಲ್ವಾ ಎಂದು ಪ್ರಶ್ನೆ ಮಾಡಿದರು. ಅಲ್ಲಿ ಓಡಾಟ ನಡೆಸೋಕೆ ಯಾರು ಸಿಗುತ್ತಾರೆ. ಯಾವುದಾದರೂ ಒಂದು ತಪ್ಪು ಮಾಡಿದವರೇ ಅಲ್ವಾ ಜೈಲಿಗೆ ಹೋಗೋದು ಎಂದು ದರ್ಶನ್‌ರನ್ನು ಸಮರ್ಥನೆ ಮಾಡಿಕೊಂಡು ಮಾತನಾಡಿದರು.
ದರ್ಶನ್ ರಾಜಾತಿಥ್ಯ ಬಗ್ಗೆ ಜೈಲಿನಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳನ್ನೇ ಕೇಳಬೇಕು. ಇದರಲ್ಲಿ ಭಾಗಿಯಾದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ದರ್ಶನ್ ಈಗ ಆರೋಪಿ ಸ್ಥಾನದಲ್ಲಿದ್ದಾರೆ. ಉಳಿದವರನ್ನು ಬಿಟ್ಟು ದರ್ಶನ್‌ರನ್ನೇ ಹೈಲೆಟ್ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.