Mysore
16
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಪ್ರಭಾಕರ್‌ ಭಟ್‌ ಕಲ್ಲಡ್ಕ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

ಬೆಂಗಳೂರು: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಪ್ರಭಾಕರ್‌ ಭಟ್‌ ಕಲ್ಲಡ್ಕ ವಿರುದ್ಧ ಶ್ರೀರಂಗಪಟ್ಟಣ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ಪ್ರಕರಣದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಡಾ.ಪ್ರಭಾಕರ್‌ ಭಟ್‌ ಕಲ್ಲಡ್ಕ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

2023ರ ಡಿಸೆಂಬರ್‌ 24ರ ಮಧ್ಯಾಹ್ನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಡಾ.ಪ್ರಭಾಕರ್‌ ಭಟ್‌ ಮಾತನಾಡಿದ್ದರು.

ಈ ಭಾಷಣದಲ್ಲಿ ಅವರು ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡ ಇರಲಿಲ್ಲ. ಅವರಿಗೆ ದಿನಕ್ಕೊಬ್ಬ ಗಂಡ. ಪರ್ಮನೆಂಟ್‌ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ ಎಂದು ಹೇಳಿದ್ದರು. ಈ ಹೇಳಿಕೆಯು ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯರ ಮೇಲೆ ಸಾರ್ವಜನಿಕರು ಬಲ ಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ ಜೀವ ಬೆದರಿಕೆ ಒಡ್ಡುವ ಅಪರಾಧ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್‌ ಬಿಗ್‌ ನಜೀರ್‌ ಅಹಮ್ಮದ್‌ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಶ್ರೀರಂಗಪಟ್ಟಣ ಜೆಎಂಎಫ್‌ಸಿ ವಿಚಾರಣಾ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

 

Tags:
error: Content is protected !!