ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ದ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರರಾದ ಕೆ.ಆರ್ ಸೌಮ್ಯ ಎಂಬುವವರ ಪುತ್ರಿ ಪ್ರಬುದ್ದ ಆಗಿದ್ದಾರೆ. ಹಲವಾರು ವಿಚಾರಗಳಲ್ಲಿ, ಜನರ ಪರವಾಗಿ ಧನಿ ಎತ್ತುವ ಮೂಲಕ ನ್ಯಾಯ ಕೊಡಿಸಿದ ನನಗೆ ಇಂದು ನ್ಯಾಯ ಸಿಗುತ್ತಿಲ್ಲ. ಪೊಲೀಸರಿಂದ ಸರಿಯಾದ ಸ್ಪಂದನೆ ಹಾಗೂ ತನಿಖೆ ನಡೆಯುತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸೌಮ್ಯ ಅವರು ಆಗ್ರಹಿಸಿದ್ದರು.
ಇದೇ ಮೇ.15 ರಂದು ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವತೀಯ ಬಿಬಿಎ ವಿದ್ಯಾರ್ಥಿನಿ ಪ್ರಬುದ್ದ ಅವರ ಕೊಲೆಯಾಗಿತ್ತು. ಈ ಬಗ್ಗೆ ಅವರ ತಾಯಿ ಸಿಐಡಿ ತನಿಖೆಯಾಗಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದರು.
ಈ ಮನವಿಯನ್ನು ಪುರಸ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.




