ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಶುರುವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ ಸ್ವಾಮೀಜಿಗಳು ಸಿಎಂ ಕುರ್ಚಿ ಬಗ್ಗೆ ಆಗಾಗ್ಗೆ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಈಗ ಸರ್ಕಾರದಲ್ಲಿ ಹೊಸ ಸಂಚಲನವೊಂದು ಸೃಷ್ಟಿಯಾಗಿದ್ದು, ಕುರ್ಚಿ ದಂಗಲ್ ಶುರುವಾಗಿದೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಿತ್ತಾಟ ಶುರುವಾಗಿದ್ದು, ಈ ಮೂಲಕ ಸಿದ್ದರಾಮಯ್ಯರನ್ನು ಕಟ್ಟಿಹಾಕುವ ಯತ್ನ ನಡೆಸಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯರನ್ನು ಕಟ್ಟಿಹಾಕಿದ್ರೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಡ್ಯಾಮೇಜ್ ಆಗಲಿದ್ದು, ಆಡಳಿತ ವ್ಯವಸ್ಥೆ ಇನ್ನೂ ಹದಗೆಡಲಿದೆ ಎಂದರು. ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿಲುವು ಸ್ಪಷ್ಟವಾಗಿರಲಿ. ಯಾವುದೇ ಕಾರಣಕ್ಕೂ ಹೈಕಮಾಂಡ್ ಈ ವಿಚಾರದಲ್ಲಿ ಅಸ್ಪಷ್ಟ ನಿಲುವು ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಗ್ಯಾರಂಟಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಪರದಾಟ ನಡೆಸುತ್ತಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನಲ್ಲಿ ಕುರ್ಚಿ ದಂಗಲ್ ಶುರುವಾದ ಬೆನ್ನಲ್ಲೇ ಈಗ ಬಿಜೆಪಿ ನಾಯಕರು ಒಬ್ಬರಿಗೊಬ್ಬರು ಸರ್ಕಾರದ ವಿರುದ್ಧ ಟಕ್ಕರ್ ಕೊಡಲು ಮುಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಕುರ್ಚಿ ಬದಲಾಗುತ್ತಾ.? ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರು ಕೂರಲಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.