ದಾವಣಗೆರೆ: ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಅಂಗೀಕರಿಸುವ ಹಠಕ್ಕೆ ಬಿಳಬಾರದು ಎಂದು ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಇಂದು ದಾವಣಗೆರೆಯ ಎಂಬಿಎ ಮೈದಾನದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಸಭೆಯ 24 ನೇ ಮಹಾ ಅಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಅವರು, ಸರ್ವರ ಭಾವನೆಗಳಿಗೆ ಬೆಲೆ ಕೊಡಬೇಕು. ಕಾಂತರಾಜ ಆಯೋಗದ ವರದಿಯಲ್ಲಿ ಹತ್ತಾರು ದೋಷಗಳಿದ್ದು, ಇದನ್ನ ಅಂಗೀಕರಿಸುವುದು ಬೇಡ ಎಂದು ಸರ್ಕಾರಕ್ಕೆ ಸೂಚಿಸಿದರು.
ಜಾತಿ ಗಣತಿ ವರದಿ ಸಮರ್ಪಕವಾಗಿಲ್ಲ, ಮೇಲಾಗಿ ಯಾವ ಜಾತಿಯ ಜನ ಸಂಖ್ಯೆ ಎಷ್ಟಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಹೀಗೆ ಮಾಧ್ಯಮಗಳಲ್ಲಿ ಬಹಿರಂಗವಾಗಿ ಬಂದ ವರದಿಯನ್ನ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅಥವಾ ರಾಜ್ಯ ಸರ್ಕಾರ ಅಲ್ಲಗಳೆದಿಲ್ಲ. ಈ ಎಲ್ಲ ಕಾರಣಕ್ಕೆ ಜಾತಿ ಗಣತಿ ಅಂಗೀಕಾರ ಬೇಡ. ಈ ವಿಚಾರದಲ್ಲಿ ಸರ್ಕಾರ ಹಟಕ್ಕೆ ಬಿಳಬಾರದು. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಜಾತಿ ಗಣತಿ ಅಂಗೀಕಾರ ಬೇಡ ಎಂದು ಶಾಮನೂರ ಹೇಳಿದ್ದಾರೆ.