ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭ್ರಮೆಯಿಂದ ಹೊರಬಂದು ರಾಜ್ಯ ರೈತರ ವಿದ್ಯುತ್ ಸಂಕಷ್ಟದ ಕೊರತೆ ನಿವಾರಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು (ಫೆ.21) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಅಸರ್ಮಪಕವಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದಿನಪೂರ್ತಿ ವಿದ್ಯುತ್ ಪೂರೈಸುತ್ತೇವೆ ಎಂದು ಹೇಳುತ್ತೀರಿ.ಆದರೆ, ಕನಿಷ್ಠ 6 ಗಂಟೆ ವಿದ್ಯುತ್ ಪೂರೈಕೆ ಕೂಡ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರೈತರನ್ನು ಸಂಕಷ್ಟಕ್ಕೆ ದೂಡಬಾರದು. ಒಂದು ವೇಳೆ ವಿದ್ಯುತ್ ಆಭಾವವಿದ್ದರೆ ಹೊರ ರಾಜ್ಯಗಳಿಂದ ಖರೀದಿಸಿ ರೈತರ ವಿದ್ಯುತ್ ಆಭಾವ ದೂರಮಾಡಿ ಎಂದು ಹೇಳಿದರು.
ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ಅವೈಜ್ಞಾನಿಕ ಮತ್ತು ಅವಿವೇಕದ ತೀರ್ಮಾನ. ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಬಿಡಿವುದಿಲ್ಲ. ಈ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಒಂದು ಜಿಲ್ಲೆ ಒಂದು ವಿಶ್ವವಿದ್ಯಾಲಯ ಪರಿಕಲ್ಪನೆಯಡಿ ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಹಣಕಾಸಿನ ಬಿಕ್ಕಟ್ಟನ್ನೆ ಆಧಾರವಾಗಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಬಾರದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.





