ಬೆಂಗಳೂರು: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ. ಇನ್ನು ಮುಂದಾದರೂ ಕನ್ನಡಿಗರು ತಲೆ ತಗ್ಗಿಸುವಂತಹ ಸನ್ನಿವೇಶ ನಿರ್ಮಾಣವಾಗದಂತೆ ವರ್ತಿಸಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿಯು, ಪಹಲ್ಗಾಮ್ ಉಗ್ರರ ದಾಳಿ ಘಟನೆ ಕುರಿತು ಹೇಳಿಕೆ ನೀಡಿ ಭಾರೀ ಟೀಕೆಗೆ ಒಳಗಾಗಿ ನಂತರ ಸಿಎಂ ಸಮರ್ಥನೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಸಲಹೆ ನೀಡಿದೆ.
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಕೆಟ್ಟ ಮೇಲಾದರೂ ತಮಗೆ ಬುದ್ಧಿ ಬಂತಲ್ಲ ಎನ್ನುವ ಸಮಾಧಾನ ಒಂದು ಕಡೆಯಾದರೆ, ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರೀಯ ಭದ್ರಯೆ ವಿಷಯದಲ್ಲೂ ರಾಜಿ ಮಾಡಿಕೊಳ್ಳಲು ಹೇಸುವುದಿಲ್ಲವಲ್ಲ ಎಂಬ ಆತಂಕ ಮತ್ತೊಂದು ಕಡೆ.
ತಮ್ಮ ಬಾಲಿಶ ಹೇಳಿಕೆ ಶತ್ರುರಾಷ್ಟ್ರದ ಷಡ್ಯಂತ್ರ ಹಾಗೂ ಕುತಂತ್ರಕ್ಕೆ ಆಹಾರವಾಗಿದೆ. ಇನ್ನು ಮುಂದಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ಇನ್ನು ಮುಂದೆ ಕನ್ನಡಿಗರು ತಲೆ ತಗ್ಗಿಸುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದೆ.





