Mysore
29
scattered clouds

Social Media

ಶುಕ್ರವಾರ, 04 ಏಪ್ರಿಲ 2025
Light
Dark

ರಾಜ್ಯ ಬಿಜೆಪಿ ಕೇಂದ್ರದ ವಿರುದ್ದ ಪ್ರತಿಭಟಿಸಲಿ : ಸಚಿವೆ ಹೆಬ್ಬಾಳಕರ್‌

  • ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ
  • ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲ

ಬೆಳಗಾವಿ: ಕರ್ನಾಟಕ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ, ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರ ಸರಕಾರ ಜನ ಸಾಮಾನ್ಯರಿಗೆ ಹೊರೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.

ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇಂಧನ ಬೆಲೆ ಏರಿಕೆ, ಗ್ಯಾಸ್, ಪ್ರತಿಯೊಂದು ದಿನಸಿ ಬೆಲೆಗಳ ಏರಿಕೆಯಾಗಿದೆ. ಇದರ ಬಗ್ಗೆ ಮೊದಲು ಬಿಜೆಪಿಯವರು ಪ್ರಶ್ನಿಸಲಿ, ಹಾಲಿನ ದರ ಏರಿಸಿರುವುದರಿಂದ ರೈತರಿಗೆ ಅನುಕೂಲ ಆಗಿದೆ ಎಂದು ತಿರುಗೇಟು ನೀಡಿದರು.

ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿದ್ದಾರೆ, ರಾಜ್ಯಕ್ಕೆ ನ್ಯಾಯಕೊಡಿಸಲಿ. ನಮ್ಮ ಹಕ್ಕು ನಮ್ಮ ತೆರಿಗೆ ಅಂತ ಹೋರಾಟ ಮಾಡಿದರೂ ಪ್ರಯೋಜವಾಗಲಿಲ್ಲ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗೆ ಇದ್ಯಾ?. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಕೇಂದ್ರದಲ್ಲಿ ಪ್ರಶ್ನಿಸಲಾಗದ ನಾಯಕರು ಈಗ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಲು ಮುಂದಾಗಿರುವುದು ಹಾಸ್ಯಸ್ಪದ ಎಂದು ಸಚಿವರು ತಿಳಿಸಿದರು.

ಬಿಜೆಪಿ ಸರ್ಕಾರ ಕಡೇ ದಿನಗಳಲ್ಲಿ ಮಾಡಿದ ತಪ್ಪಿನಿಂದಾಗಿ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಕ್ಕ ಸಿಕ್ಕಂತೆ ಟೆಂಡರ್ ಮಾಡಿ, ಯಾವುದೇ ಹಣ ಬಿಡುಗಡೆ ಮಾಡದೇ ಹೋದರು. ಇದೀಗ ಹಣ ಬಿಡುಗಡೆ ಮಾಡಿ ಅಂತ ನಮ್ಮನ್ನು ಕೇಳುತ್ತಿದ್ದಾರೆ. ಗುತ್ತಿಗೆದಾರರ ಸಂಕಷ್ಟಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಹೊಣೆ ಎಂದು ದೂರಿದರು.

ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿರುವ ಪಕ್ಷ. ಸರ್ವಜನಾಂಗಕ್ಕೂ ಬೇಕಾಗಿರುವ ಪಕ್ಷ ಕಾಂಗ್ರೆಸ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಗೃಹಲಕ್ಷ್ಮಿ ಹಣ ಬಿಡುಗಡೆ
ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವೂ ಈಗಾಗಲೇ ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಜೊತೆಗೆ ಫೆಬ್ರವರಿ ತಿಂಗಳ ಹಣ ಕೂಡ ಈಗಾಗಲೇ ಬಿಡುಗಡೆಯಾಗಿದ್ದು, ಶೀಘ್ರವೇ ಫೆಬ್ರವರಿ ತಿಂಗಳ ಹಣ ಸಂದಾಯವಾಗಲಿದೆ ಎಂದು ಹೇಳಿದರು.

Tags: