ಬೆಂಗಳೂರು: ಗ್ಯಾರಂಟಿ ಯೋಜನೆಗಳ ಹಣ ದುರುಪಯೋಗ, ಬೆಲೆ ಏರಿಕೆ ಮತ್ತು ಆರ್ಥಿಕ ದುಸ್ಥಿತಿಯಿಂದ ರಾಜ್ಯ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸತತವಾಗಿ ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರ ರಾಜ್ಯದ ಜನತೆ ಮೇಲೆ ಬರೆ ಎಳೆಯುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಆಸ್ತಿ ನೋಂದಣಿ ಶುಲ್ಕ-ಶೇ 60, ಆಸ್ತಿ ಮಾರ್ಗದರ್ಶನ ಮೌಲ್ಯಗಳು- ಶೇ 30, ವಾಹನ ನೋಂದಣಿ ಶುಲ್ಕ-ಶೇ 10, ಆಸ್ಪತ್ರೆ ಸೇವಾ ಶುಲ್ಕಗಳು-ಶೇ 5, ಸರ್ಕಾರಿ ಕಾಲೇಜು ಶುಲ್ಕಗಳು-ಶೇ 10, ಬೆಂಗಳೂರು ಮೆಟ್ರೋ ದರ- ಶೇ 50, ಜನನ ಮತ್ತು ಮರಣ ಪ್ರಮಾಣ ಪತ್ರಗಳ ಶುಲ್ಕ-ಶೇ 100 ಸೇರಿದಂತೆ ಇನ್ನಿತರ ಬೆಲೆ ಏರಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಬಾಕಿ ನೀಡಬೇಕಿರುವ 7,000 ಕೋಟಿ ರೂ. ನೀಡದೇ ಸಾರಿಗೆ ಸಂಸ್ಥೆ ಮುಚ್ಚುವ ಸ್ಥಿತಿಗೆ ತಲುಪಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





