Mysore
18
few clouds

Social Media

ಬುಧವಾರ, 28 ಜನವರಿ 2026
Light
Dark

ಕೌನ್ಸೆಲಿಂಗ್ ಮೂಲಕ ಪಿಡಿಒ ವರ್ಗಾವಣೆ ಪ್ರಕ್ರಿಯೆ ಆರಂಭ ; ಪಾರದರ್ಶಕತೆಯತ್ತ ಗ್ರಾಮೀಣಾಭಿವೃದ್ದಿ ಇಲಾಖೆ : ಪ್ರಿಯಾಂಕ್ ಖರ್ಗೆ

priyanka kharghe

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು, ಪ್ರಸಕ್ತ ಸಾಲಿನಲ್ಲಿ ಒಂದು ಬಾರಿಗೆ ಅನ್ವಯಿಸುವಂತೆ ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಿದ್ದು 2025ರ ಸೆಪ್ಟೆಂಬರ್ 10ರಿಂದ 2025ರ ಸೆಪ್ಟೆಂಬರ್ 20 ರವರೆಗೆ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಹಾಗೂ ಸೆಪ್ಟೆಂಬರ್ 23 ಹಾಗೂ 24ರಂದು ಸಾಮಾನ್ಯ ಕೋರಿಕೆ ವರ್ಗಾವಣೆಗಳ ಕೌನ್ಸಿಲಿಂಗ್ ಪ್ರಕ್ರಿಯೆಗಳು ಜರುಗಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಪಂಚಾಯತಿ ಅಭಿವೃದ್ದಿ ಆಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ದಿ ಸಹಾಯಕ (ಗ್ರೇಡ್-1 & ಗ್ರೇಡ್-2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು 2024ನ್ನು ರಚಿಸಿ, ಅಧಿಸೂಚಿಸಲಾಗಿದೆದೆ.

ಈ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ತಂದು, ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ಕಡ್ಡಾಯವಾಗಿ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ.

ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆನ್ ಲೈನ್ ಮೂಲಕ ವಿಶೇಷ ಪ್ರಕರಣಗಳ ಅಡಿಯಲ್ಲಿ 515 ಅರ್ಜಿಗಳು ಹಾಗೂ ಸಾಮಾನ್ಯ ಕೋರಿಕೆಯ ಅಡಿಯಲ್ಲಿ 1215 ಅರ್ಜಿಗಳು ಸೇರಿದಂತೆ ಒಟ್ಟು 1730 ಅರ್ಜಿಗಳು ಸ್ವೀಕೃತಗೊಂಡಿವೆ, ಪ್ರಸ್ತುತ ಖಾಲಿ ಹುದ್ದೆಗಳ, ಕಡ್ಡಾಯ ವರ್ಗಾವಣೆಗಳ ರಾಜ್ಯವಾರು ಅಂತಿಮ ಪಟ್ಟಿ ಹಾಗೂ ವರ್ಗಾವಣೆಯಿಂದ ವಿನಾಯತಿಗಾಗಿ ಕೋರಿಕೆ ಸಲ್ಲಿಸಿದವರ ಪಟ್ಟಿಯನ್ನು https://rdprtransfer.karnataka.gov.in/ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಕಳೆದ 29ರಂದು ವಿಶೇಷ ಪ್ರಕರಣಗಳ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿಯನ್ನು ಸೆಪ್ಟೆಂಬರ್‌ 01ರಂದು ಸಾಮಾನ್ಯ ಕೋರಿಕೆ ಮತ್ತು ಕಡ್ಡಾಯ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿರುವ ಸಚಿವರು ಈ ತಿಂಗಳ 03ರಿಂದ 08ರವರೆಗೆ ವಿಶೇಷ ಪ್ರಕರಣಗಳ ಮೊದಲ ಸುತ್ತಿನ ಕೌನ್ಸಿಲಿಂಗ್ ಹಾಗೂ ಈ ತಿಂಗಳ 08ರಂದು ವಿಶೇಷ ಪ್ರಕರಣಗಳ ಎರಡನೇ ಸುತ್ತಿನ ಕೌನ್ಸಿಲಿಂಗ್ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

2024-25ನೇ ಸಾಲಿನ ಆಯವ್ಯಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತ್ವರಿತ ಸೇವಾ ಪೂರೈಕೆ, ಭ್ರಷ್ಟಾಚಾರ ನಿಯಂತ್ರಣ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುವುದೆಂದು ಘೋಷಿಸಿದ್ದಂತೆ ಸರ್ಕಾರ ಕಳೆದ ಜೂನ್ 25ರಂದು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಲಾಖೆಯು ಇದೇ ಮೊದಲ ಬಾರಿಗೆ ಪಿಡಿಒ ವರ್ಗಾವಣೆ ಪ್ರಕ್ರಿಯೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ನಡೆಸುತ್ತಿದ್ದು ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಜೊತೆಗೆ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ. ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳಿಗೆ ಸಂಬಂಧಿಸಿದಂತೆ 31 ಜಿಲ್ಲೆಗಳಲ್ಲಿ ಅರ್ಹತೆ ಹೊಂದಿದ 1300 ನೌಕರರಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ಹೊರಡಿಸಿ ಸ್ಥಳದಲ್ಲೇ ನೌಕರರಿಗೆ ನೀಡಿದ್ದು, ಇಲಾಖೆ ಪ್ರಥಮ ಬಾರಿಗೆ ಪಾರದರ್ಶಕ ರೀತಿಯಲ್ಲಿ ಪ್ರಕ್ರಿಯೆಗಳನ್ನು ನಡೆಸಿದೆ ಎಂದೂ ಸಚಿವರು ತಿಳಿಸಿದ್ದಾರೆ.

Tags:
error: Content is protected !!