Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಅಲ್ಪ ಅರಣ್ಯವಿರುವ 16 ಜಿಲ್ಲೆಗಳಿಗೆ ವಿಶೇಷ ಯೋಜನೆ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಸೇರಿದಂತೆ ಹಸಿರು ಹೊದಿಕೆ ಮತ್ತು ಅರಣ್ಯ ವ್ಯಾಪ್ತಿ ಕಡಿಮೆ ಇರುವ 16 ಜಿಲ್ಲೆಗಳಿಗೆ ವಿಶೇಷ ಯೋಜನೆ ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸೂಚಿಸಿದ್ದಾರೆ.

ಇಂದು (ಜ.24) ವಿಕಾಸಸೌಧದಲ್ಲಿ ಸಂಜೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಬಿಸಿಲು ಹೆಚ್ಚಿರುವ ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಬೀದರ್, ಕಲ್ಬುರ್ಗಿ ಸೇರಿದಂತೆ ಹಸಿರು ವ್ಯಾಪ್ತಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಎತ್ತರದ ಸಸಿಗಳನ್ನು ಹೆಚ್ಚು ಹೆಚ್ಚು ನೆಟ್ಟು, ಅವುಗಳಿಗೆ ನೀರುಣಿಸಿ, ಜಿಯೋ ಟ್ಯಾಗ್ ಮಾಡಿ ಸಂರಕ್ಷಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಹಸಿರು ಹೊದಿಕೆ ಕಡಿಮೆ ಇರುವ ಜಿಲ್ಲೆಗಳಲ್ಲಿನ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆ ಮತ್ತು ಗ್ರಾಮೀಣ ರಸ್ತೆಗಳನ್ನು ಗುರುತಿಸಿ ರಸ್ತೆಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಅದಕ್ಕೆ ಈಗಿನಿಂದಲೇ ರಸ್ತೆಗಳನ್ನು ಗುರುತಿಸಿ, ಕಾರ್ಯಯೋಜನೆ ರೂಪಿಸಿ ಎಂದು ತಿಳಿಸಿದರು.

ಅರಣ್ಯ ಇಲಾಖೆಯ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಎಲ್ಲ ನರ್ಸರಿಗಳಲ್ಲಿ ಸ್ಥಳೀಯ ಗಿಡಗಳನ್ನು ಬೆಳೆಸಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಎತ್ತರದ ಸಸಿಗಳನ್ನು ಬೆಳೆಸಲು ಕ್ರಮವಹಿಸುವಂತೆ ಸೂಚಿಸಿದರು.

ಇಂದು ಇಡೀ ಜಗತ್ತು ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆ ಎದುರಿಸುತ್ತಿದೆ. ವೃಕ್ಷ ಸಂಪತ್ತು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ ಪೀಳಿಗೆಗೆ ಆರೋಗ್ಯಪೂರ್ಣ ಭೂಮಿಯನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯ ಜೀವಿ ಪರಿಪಾಲಕರಾದ ಸುಭಾಷ್ ಮಾಲ್ಕಡೆ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Tags:
error: Content is protected !!