Mysore
20
overcast clouds
Light
Dark

ಶ್ರೀ ಕ್ಷೇತ್ರ ಚುಂಚನಗಿರಿಯಲ್ಲಿ ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜೆ

ಕೆ.ಆರ್.ಪೇಟೆ : ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಸಾರಥ್ಯದಲ್ಲಿ ತಾಲ್ಲೂಕಿನ ಹೇಮಗಿರಿ ಮಹಾಸಂಸ್ಥಾನ ಶಾಖಾ ಮಠದ ವತಿಯಿಂದ ಶರನ್ನವರಾತ್ರಿ ಅಂಗವಾಗಿ ವಿಶೇಷ ಪೂಜೆ, ಪುನಸ್ಕಾರಗಳು ವಿಜೃಂಭಣೆಯಿಂದ ನಡೆದವು.

ತಾಲ್ಲೂಕಿನಿಂದ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು. ಸಂಜೆ ಆರು ಗಂಟೆಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಿಘ್ನ ವಿನಾಯಕನಿಗೆ ವಿಶೇಷಪೂಜೆ ಸಲ್ಲಿಸುವ ಮೂಲಕ ಪೂಜಾಕಾರ್ಯಗಳು ಆರಂಭವಾದವು.

ನಂತರ ಶ್ರೀಕ್ಷೇತ್ರದಲ್ಲಿ ಶಿವನು ತಪಸ್ಸು ಮಾಡಿದ ಸ್ಥಳಕ್ಕೆ ಪೂಜೆ ಸಲ್ಲಿಸಲಾಯಿತು. ನೂರಾರು ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳನ್ನು ನಿರಂತರವಾಗಿ ಪಠಿಸುವ ಮೂಲಕ ಪೂಜೆಗೆ ಮೆರುಗು ತಂದರು. ನೂರಾರು ಶ್ರೀಮಠದ ಭಕ್ತರು ಹಾಗೂ ಮಂಗಳವಾದ್ಯಗಳ ಝೇಂಕಾರದೊಂದಿಗೆ ಶ್ರೀಮಠದಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಸನ್ನಿಧಿಗೆ ತೆರಳಿ ವಿಶೇಷಪೂಜೆ ಸಲ್ಲಿಸಲಾಯಿತು.

ನಂತರ ಶ್ರೀಕ್ಷೇತ್ರದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ನವರಾತ್ರಿಯ ಅಂಗವಾಗಿ ದೇವಿಗೆ ನೂರಾರು ಬಗೆಯ ಪುಷ್ಪಗಳನ್ನು ಸಮರ್ಪಿಸಿ, ಶ್ರೀಗಂಧ, ಕುಂಕುಮ, ಅರಿಶಿನ ಸೇರಿದಂತೆ ವಿವಿಧ ಬಗೆಯ ಅರ್ಚನೆಗಳೊಂದಿಗೆ ಪೂಜೆ ಸಲ್ಲಿಸಿದರು. ಪೂಜಾ ಸಮಾರಂಭದಲ್ಲಿ ತಾಲ್ಲೂಕಿನಿಂದ ಆಗಮಿಸಿದ್ದ ಸಾವಿರಾರು ಶ್ರೀಮಠದ ಭಕ್ತರು ಭಾಗವಹಿಸಿ ಭಕ್ತಿಭಾವ ಮೆರೆದರು. ಪೂಜಾ ಕಂಕೈರ್ಯಗಳಲ್ಲಿ ಭಾಗವಹಿಸಿದ್ದ ಎಲ್ಲಾ ಸದ್ಬಕ್ತರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಸಮಾಜ ಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್, ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್, ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ