Mysore
25
few clouds

Social Media

ಸೋಮವಾರ, 05 ಜನವರಿ 2026
Light
Dark

ಮಾರ್ಯಾದಾಗೇಡು ಹತ್ಯೆ ತಡೆಗೆ ವಿಶೇಷ ಕಾನೂನು : ಸಿಎಂ ಅಧಿಕೃತ ಘೋಷಣೆ

ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಆರು ತಿಂಗಳ ಗರ್ಭಿಣಿಯ ಮರ್ಯಾದಾಗೇಡು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರ್ಯಾದಾಗೇಡು ಹತ್ಯೆ ತಡೆಗೆ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ಮಾಹಿತಿ ಹಂಚಿಕೊಂಡಿದ್ದು, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು ಎಂದು ಹೇಳಿದ್ದಾರೆ.

ತ್ವರಿತಗತಿ ನ್ಯಾಯಾಲಯ
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಮಾನ್ಯಾಳ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ ಎಂದಿದ್ದಾರೆ.

ಹೆಣ್ಣು ಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ-ಹಲ್ಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳ ತಡೆಗೆ ವಿಶೇಷ ಕಾನೂನು ರಚನೆ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

 

Tags:
error: Content is protected !!