Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಬಿಜೆಪಿ ಸೋಲಿಗೆ ಪುತ್ರ ವ್ಯಾಮೋಹವೇ ಕಾರಣ: ಶಾಸಕ ಯತ್ನಾಳ್‌ ಕಿಡಿ

ಚಿಕ್ಕೋಡಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲಲು ಪುತ್ರ ವ್ಯಾಮೋಹವೇ ಕಾರಣವಾಗಿದೆ. ಈ ಬಗ್ಗೆ ಹೈಕಮಾಂಡ್‌ ಗಂಭೀರವಾಗಿ ಚರ್ಚೆ ಮಾಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಕಬ್ಬೂರು ಗ್ರಾಮದಲ್ಲಿ ಇಂದು(ನ.23) ಉಪಚುನಾವಣೆಯ ಫಲಿತಾಂಶದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ ಬೊಮ್ಮಾಯಿಯ ಸೋಲು ಆಘಾತ ತಂದಿದೆ. ಮತದಾರರು ಒಬ್ಬ ರೌಡಿಯನ್ನು ಆಯ್ಕೆ ಮಾಡಿದ್ದಾರೆಂದರೆ ಏನು ಅರ್ಥ? ವಿಜಯೇಂದ್ರ ನಾಯಕತ್ವವನ್ನು ಮತದಾರರು ತಿರಸ್ಕಾರ ಮಾಡಿದ್ದಾರೆ. ಅವರಿಗೆ ನಿಜವಾಗಲು ಸ್ವಾಭಿಮಾನವಿದ್ದರೆ ಅವರೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.

ರಾಜ್ಯದ ಬಿಜೆಪಿಯಲ್ಲಿ ಹೊಸ ನಾಯಕತ್ವ ಬೇಕಿದ್ದು, ಈ ಬಗ್ಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸೋತಿರುವುದು ದುರ್ದೈವವಾಗಿದೆ. ಬಿಜೆಪಿಯಿಂದ ಯೋಗೇಶ್ವರ್‌ಗೆ ಟಿಕೆಟ್‌ ನೀಡುವಂತೆ ಹೇಳಿದ್ದೆ. ಆದರೆ ಪುತ್ರ ವ್ಯಾಮೋಹದಿಂದ ಅವರಿಗೆ ಟಿಕೆಟ್‌ ನೀಡದೆ ಕಾಂಗ್ರೆಸ್‌ಗೆ ಪಕ್ಷಾಂತರವಾಗುವಂತೆ ಮಾಡಿದರು. ಹೀಗಾಗಿ ಕುಮಾರಸ್ವಾಮಿ ಪಕ್ಷ ಸಂಘಟನೆ ಮಾಡುವಾಗ ಯೋಚನೆ ಮಾಡಿ ಸಂಘಟನೆ ಮಾಡಬೇಕು ಎಂದು ಹೇಳಿದ್ದಾರೆ.

ಬಿಜೆಪಿಯಿಂದ ರಾಜ್ಯಾದ್ಯಂತ ವಕ್ಫ್‌ ಹೋರಾಟ ಪ್ರಾರಂಭವಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಜಾಗೃತಿ ಮೂಡಿಸುತ್ತೇವೆ. ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದರೆ ರೈತರ ಜಮೀನು ಸಿಗುವುದಿಲ್ಲ. ಹೀಗಾಗಿ ಹೈಕಮಾಂಡ್‌ ಬಳಿ ವಿಜಯೇಂದ್ರ ವಿರುದ್ಧ ನಿಯೋಗ ತೆರಳಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಕಣ್ಣು ತೆರೆಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Tags: