ಬೆಂಗಳೂರು: ಸ್ಮಾರ್ಟ್ ಮೀಟರ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಗರಣ ನಡೆದಿದೆ ಎಂದು ರಾಜ್ಯ ಸರ್ಕಾರದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಗರದ ಜೆಪಿ ಭವನದಲ್ಲಿ ಇಂದು(ಮಾರ್ಚ್.25) ಈ ಕುರಿತು ಮಾಧ್ಯಮಗಳೊಂದಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದಿದೆ. ಆದರೆ ಅಧಿಕಾರಕ್ಕೆ ಬಂದಾಗಿನಿಂದ ದೊಡ್ಡ ಹಗರಣಗಳೇ ಬಯಲಿಗೆ ಬರುತ್ತಿವೆ. ಈ ಸರ್ಕಾರದಿಂದ ರಾಜ್ಯದ ಜನತೆ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಈ ಸರ್ಕಾರದಿಂದ ಸ್ಮಾರ್ಟ್ ಮೀಟರ್‌ನಲ್ಲಿ ಅಕ್ರಮ ನಡೆದಿದ್ದು, ಇದರ ಟೆಂಡರ್ ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಸದನದಲ್ಲಿಯೂ ಕೂಡ ಈ ಹಗರಣ ಬಗ್ಗೆ ಪ್ರಸ್ತಾಪ ಆಗಿದೆ ಎಂದರು.
ದೇಶದ ಅನೇಕ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿಕೊಂಡಿವೆ. ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಸೂಚನೆ ನೀಡಿತ್ತು. ಅಂತೆಯೇ ಕೇಂದ್ರದಿಂದ ಸ್ಮಾರ್ಟ್ ಮೀಟರ್‌ಗೆ ಸಬ್ಸಿಡಿ ನೀಡುತ್ತಿದೆ. ಈಗಾಗಲೇ ದೇಶದಲ್ಲಿ 19 ಕೋಟಿ ರೂ.ನಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಬಾಟಾ ಚಪ್ಪಲಿ ರೀತಿ 4,998 ರೂ. ಹಣ ಫಿಕ್ಸ್ ಮಾಡಿದ್ದಾರೆ. ಹೀಗಾಗಿ ನಮ್ಮ ಪಕ್ಷ ಮತ್ತು ಬಿಜೆಪಿ ಒಟ್ಟಾಗಿ ಅಕ್ರಮದ ಬಗ್ಗೆ ಹೋರಾಟ ಮಾಡಿ, ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಇನ್ನು ಈ ಹಗರಣ ಬಗ್ಗೆ ಯಾರಿದ್ದಾರೆಂದು ತಿಳಿಯಬೇಕಿದೆ. ಸ್ಮಾರ್ಟ್ ಮೀಟರ್‌ನಲ್ಲಿ ನಡೆದಿರುವ ಅಕ್ರಮ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ನಡೆದಿರಲು ಸಾಧ್ಯವೇ ಇಲ್ಲ. ರಾಜ್ಯದ ಜನತೆಗೆ ಎಲ್ಲಾ ರೀತಿಯಲ್ಲಿಯೂ ಬೆಲೆ ಏರಿಕೆ ಬರೆ ಎಳೆದಿದ್ದು, ಯಾವುದನ್ನು ಬಿಟ್ಟಿಲ್ಲ. ಹಾಗಾಗಿ ಸ್ಮಾರ್ಟ್ ಮೀಟರ್ ಬರೆ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ದಪ್ಪ ಚರ್ಮ ಇಟ್ಟುಕೊಂಡು ಸರ್ಕಾರ ನಡೆಸುತ್ತಿದೆ. ಅಲ್ಲದೇ ಮುಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲವೆಂದು ತಿಳಿದಿರಬೇಕು. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡೋಣವೆಂದು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.





