Mysore
20
overcast clouds
Light
Dark

ಕರ್ನಾಟಕದಿಂದ ಅಯೋಧ್ಯೆಗೆ ಆರು ವಿಶೇಷ ರೈಲು: ಮಾಹಿತಿ ಇಲ್ಲಿದೆ

ಬೆಂಗಳೂರು: ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ನೆನ್ನೆ (ಜನವರಿ ೨೨) ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ್ದು, ಇಂದಿನಿಂದ ಸಾರ್ವಜನಿಕರಿಗೆ ಬಾಲ ರಾಮನ ದರ್ಶನ ಮುಕ್ತ ಅವಕಾಶ ನೀಡಲಾಗಿದೆ.

ದೇಶಾದ್ಯಂತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಜನರು ದರ್ಶನಕ್ಕೆ ತೆರಳಲು ಸಿದ್ದರಾಗಿದ್ದಾರೆ. ಕರ್ನಾಟಕದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸಲು ನೈಋತ್ಯ ರೈಲ್ವೆ (SWR) ‘ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಬಿಡಲಿದ್ದು, ರಾಮನ ದರ್ಶನಕ್ಕೆ ತೆರಳುವವರಿಗೆ ಹೀಗೊಂದು ಸಿಹಿ ಸುದ್ದಿಯನ್ನು ನೈಋತ್ಯ ರೈಲ್ವೆ ನೀಡಿದೆ.

ಎರಡು ರೈಲುಗಳು ಮೈಸೂರಿನಿಂದ (ಎಸ್​ಎಂವಿಟಿ ಬೆಂಗಳೂರು ಮೂಲಕ), ಮತ್ತು ಎಸ್​ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋಡಗಾಮಾ (ರತ್ನಗಿರಿ ಮತ್ತು ಪನ್ವೇಲ್) ಮೂಲಕ ತಲಾ ಒಂದು ರೈಲು ಅಯೋಧ್ಯೆಗೆ ಸಂಚಾರ ನಡಸಲಿದೆ.

ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್​ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಬುಕಿಂಗ್ ಮತ್ತು ದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ರೈಲುಗಳ ವಿವರ:
ರೈಲು ಸಂಖ್ಯೆ 06203
ಇದು ತುಮಕೂರನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸುತ್ತದೆ. ಈ ರೈಲು ಬುಧವಾರ (ಫೆಬ್ರವರಿ 7 ಮತ್ತು 21) ತುಮಕೂರಿನಿಂದ ಮತ್ತು ಫೆಬ್ರವರಿ 10 ಮತ್ತು 24 ರಂದು ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,726 ಕಿಮೀ ಏಕಮುಖ ಸಂಚಾರ ಇದರದ್ದಾಗಿರಲಿದೆ.

ರೈಲು ಸಂಖ್ಯೆ 06204
ಇದು ಭಾನುವಾರ (ಫೆಬ್ರವರಿ 11 ಮತ್ತು 25) ಚಿತ್ರದುರ್ಗದಿಂದ ಮತ್ತು ಬುಧವಾರದಂದು (ಫೆಬ್ರವರಿ 14 ಮತ್ತು 28) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,483 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06205
ಇದು ವಾಸ್ಕೋಡಗಾಮಾವನ್ನು ದರ್ಶನ್ ನಗರದೊಂದಿಗೆ (ಅಯೋಧ್ಯೆಯ ಸಮೀಪವಿರುವ ರೈಲು ನಿಲ್ದಾಣ) ಸಂಪರ್ಕಿಸುತ್ತದೆ. ರೈಲು ಸೋಮವಾರ (ಫೆಬ್ರವರಿ 12 ಮತ್ತು 26) ವಾಸ್ಕೋಡಗಾಮಾದಿಂದ ಮತ್ತು ಶುಕ್ರವಾರ (ಫೆಬ್ರವರಿ 16 ಮತ್ತು ಮಾರ್ಚ್ 1) ದರ್ಶನ್ ನಗರದಿಂದ ಹೊರಡಲಿದೆ.

ಇದು ಮಜೋರ್ಡಾ, ಮಡಗಾಂವ್, ಕರ್ಮಾಲಿ, ರತ್ನಗಿರಿ, ಪನ್ವೇಲ್, ವಾಪಿ, ಕೋಟಾ, ತುಂಡ್ಲಾ, ಪ್ರಯಾಗ್‌ರಾಜ್ ಮತ್ತು ಮಿರ್ಜಾಪುರ ಮೂಲಕ ಹಾದುಹೋಗುತ್ತದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2,791 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06206
ಇದು ಮೈಸೂರನ್ನು ಅಯೋಧ್ಯೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ತಲಾ ಒಂದು ಪ್ರವಾಸವನ್ನು ಮಾಡಲಿದೆ. ಇದು ಶನಿವಾರ (ಫೆಬ್ರವರಿ 17) ಮೈಸೂರಿನಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಬಿಜಾಪುರ, ಕಲಬುರಗಿ, ವಾಡಿ, ಬಲ್ಹರ್ಷಾ, ನಾಗಪುರ, ಜಬಲ್‌ಪುರ ಮತ್ತು ಪ್ರಯಾಗರಾಜ್ ಮೂಲಕ ಹಾದು ಹೋಗಲಿದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 3,004 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06207
ಇದು ಶನಿವಾರ (ಫೆಬ್ರವರಿ 17) ಬೆಳಗಾವಿಯಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಸಿಕಂದರಾಬಾದ್, ಬಲ್ಹರ್ಷಾ ಮತ್ತು ಪ್ರಯಾಗರಾಜ್ ಮೂಲಕ ಚಲಿಸುತ್ತದೆ. ಇದು 22 ಕೋಚ್‌ಗಳನ್ನು ಹೊಂದಿದ್ದು, 2462 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ