ಬೆಂಗಳೂರು: ಮೈಸೂರಿನಲ್ಲಿರುವ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಪ್ರಸ್ತಾವನೆಗೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವಾಗಲೇ ತಮ್ಮ ಹೆಸರು ರಸ್ತೆಗೆ ಇಡಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನೈತಿಕ ಹೊಣೆಗಾರಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ರಸ್ತೆಗೆ ಇಡಲು ನಿರ್ಧರಿಸುವ ಮೂಲಕ ತುಘಲಕ್ ಆಡಳಿತ ನೆನಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಮೈಸೂರು ಸಂಸ್ಥಾನವನ್ನು ರಾಜರು ಕಟ್ಟಿ ಬೆಳೆಸಿದ್ದಾರೆ. ರಾಜವಂಶದ ಹೆಸರು ಇರುವ ರಸ್ತೆಗೆ ಮುಖ್ಯಮಂತ್ರಿ ತಮ್ಮ ಹೆಸರಿಡುತ್ತಿರುವುದು ಸರ್ವಾಧಿಕಾರದ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಚುನಾಯಿತ ಪ್ರತಿನಿಧಿಗಳಿಲ್ಲದ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇಂತಹ ನಿರ್ಧಾರ ಕೈಗೊಳ್ಳುವುದು ಎಷ್ಟು ಸರಿ ಎಂದರು.
ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರ ಸಲಹೆಯ ಮೇರೆಗೆ ಮೈಸೂರು ಮಹಾನಗರ ಪಾಲಿಕೆಯು, ಕೆಆರ್‌ಎಸ್ ರಸ್ತೆಯ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಜಂಕ್ಷನ್‌ವರೆಗೆ ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂದು ಹೆಸರಿಡುವ ಪ್ರಸ್ತಾವನೆ ಯನ್ನು ಡಿ.13ರಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಈ ಕುರಿತು ಡಿ.30ರೊಳಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೇಳಲು ನಿರ್ಧರಿಸಿದೆ.