ಮರ ಕತ್ತರಿಸಿ ಸಾಗಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯ ಅಧಿಕಾರಿಗಳು ನಿನ್ನೆ ಬಂಧಿಸಿದ್ದರು. ಸದ್ಯ ಜಾಮೀನು ಮಂಜೂರಾದ ಕಾರಣ ವಿಕ್ರಂ ಸಿಂಹ ಹೊರಬಂದಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಈ ಪ್ರಕರಣದ ಕುರಿತು ಮಾತನಾಡಿದ್ದ ಪ್ರತಾಪ್ ಸಿಂಹ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದರು.
ಸಿದ್ದರಾಮಯ್ಯನವರು ತನ್ನ ಮಗ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶದಿಂದ ನನ್ನ ಹಾಗೂ ನನ್ನ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಇದೀಗ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ “ಯಾರು ಕಾನೂನನ್ನು ಉಲ್ಲಂಘನೆ ಮಾಡ್ತಾರೋ ಅವರನ್ನು ಅರೆಸ್ಟ್ ಮಾಡ್ತಾರೆ, ಸುಮ್ಮನೆ ಯಾಕೆ ಅರೆಸ್ಟ್ ಮಾಡ್ತಾರೆ? ನಮ್ಮ ಸರ್ಕಾರದಲ್ಲಿ ಯಾವುದೇ ನಿರಪರಾಧಿಗೂ ತೊಂದರೆಯಾಗೋಕೆ ಬಿಡಲ್ಲ. ನಿರಪರಾಧಿಗಳ ಮೇಲೆ ಕಾನೂನು ಕ್ರಮ ಪ್ರಯೋಗ ಮಾಡಲ್ಲ. ಯಾರು ಅಪರಾಧ ಮಾಡ್ತಾರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದರು.