ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಹಗರಣ ಪ್ರಕರಣ ಸಂಬಂಧ ಮೈಸೂರು ಚಲೋ ಪಾದಯಾತ್ರೆ ನಡೆಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಇನ್ನು ಸಿಎಂ ಅವರಿಗೆ ಪ್ರಾಷಿಕ್ಯೂಷನ್ ಹೊರಡಿಸಿದ ರಾಜ್ಯಪಾಲರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಮುಖ್ಯಮಂತ್ರಿ ವಿರುದ್ಧದ ಮುಡಾ ಹಗರಣದ ದೂರಿನ ಮೇಲೆ ಕಾನೂನು ಕ್ರಮಕ್ಕೆ ಅಧಿಕಾರ ನೀಡಲು ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದೊಳಗಿನ ಭ್ರಷ್ಟಾಚಾರ ಬಗ್ಗೆ ಸಾಕಷ್ಟು ಪುರಾವೆಗಳು ಮತ್ತು ಗಂಭೀರ ಆರೋಪಗಳನ್ನು ನೀಡಲಾಗಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ನಿರ್ಣಾಯಕವಾಗಿದೆ. ರಾಜೀನಾಮೆ ನೀಡುವುದರಿಂದ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕಲ್ಪಿಸಿ, ಮುಖ್ಯಮಂತ್ರಿ ಕಚೇರಿಯ ಘನತೆ ಕಾಪಾಡಿ ಎಂದು ಒತ್ತಾಯಿಸಿದ್ದಾರೆ.