ಬೆಂಗಳೂರು: ಸಿದ್ದರಾಮಯ್ಯ ಅವರು ರಾಜ್ಯಕ್ಕಲ್ಲ, ಇಡೀ ದೇಶಕ್ಕೆ ಅನಿವಾರ್ಯ ಎಂದು ಶಾಸಕ ಕಂಪ್ಲಿ ಗಣೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಇರುವುದರಿಂದ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ 138 ಕ್ಷೇತ್ರದಲ್ಲಿ ಗೆದ್ದಿದೆ. ಅವರು ಒಂದು ರೀತಿಯ ರೋಲ್ ಮಾಡೆಲ್ ಇದ್ದಂತೆ. ಅವರಿಂದ ಬಳ್ಳಾರಿಯಲ್ಲಿ ನಾವು ಐದಕ್ಕೆ ಐದು ಗೆದ್ದಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿದರೆ ಒಳ್ಳೆಯದು ಎಂದರು.
ಗ್ಯಾರಂಟಿಯಿಂದ ಅನುದಾನದ ಸಿಗುತ್ತಿಲ್ಲ ಎಂಬ ಶಾಸಕರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗಿದೆ. ಜೊತೆಗೆ ಅನುದಾನ ನೀಡುವುದರಲ್ಲೂ ಯಾವುದೇ ಕೊರತೆ ಇಲ್ಲ. ನಮ್ಮ ಕಂಪ್ಲಿ ಕ್ಷೇತ್ರಕ್ಕೆ 500 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಿಂದ ನಮ್ಮ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕೆಲಸಗಳಾಗಿವೆ ಎಂದು ತಿಳಿಸಿದರು.