ಹೊಸದಿಲ್ಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕದ ೫ ನಗರಗಳಲ್ಲಿ ಸೇಫ್ ಸಿಟಿ ಯೋಜನೆ ಜಾರಿಗೆ ಆಗ್ರಹಿಸಿದ್ದಾರೆ.
ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಹಲವು ಮನವಿಗಳನ್ನು ಸಲ್ಲಿಸಿದರು. ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರು ನಗರದಂತೆಯೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ಕಲಬುರಗಿ ನಗರಗಳಲ್ಲಿ ಸೇಫ್ ಸಿಟಿ ಯೋಜನೆಯನ್ನು ತಲಾ ೨೦೦ ಕೋಟಿ ರೂ. ಗಳಂತೆ ಒಟ್ಟು ೧೦೦೦ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಆಗ್ರಹಿಸಿದರು.
ಅಲ್ಲದೆ ೧೭೫ ಕೋಟಿ ರೂ. ವೆಚ್ಚದಲ್ಲಿ ೫೮,೫೪೬ ಬಾಡಿ ವೋರ್ನ್ ಕ್ಯಾಮರಾ ಖರೀದಿಸುವ ಅಗತ್ಯವಿದ್ದು, ೧೦೦ ಕೋಟಿ ರೂ. ನೆರವು ನೀಡುವಂತೆ ಹಾಗೂ ೧೦೦ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡವನ್ನು ತಲಾ ೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ೩೦೦ ಕೋಟಿ ರೂ ನೆರವು ಸೇರಿ ಮತ್ತಿತರ ವಿಷಯಗಳ ಕುರಿತು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿ ಇತರರು ಉಪಸ್ಥಿತರಿದ್ದರು.