ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯು ಮುಕ್ತಾಯದ ಹಂತ ತಲುಪಿದೆ. ಸದ್ಯ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ 4 ತಾಸಿನ ಸುದೀರ್ಘ ಚರ್ಚೆಯ ಬಳಿಕ ನಿಗಮ ಮಂಡಳಿಯ ಅಂತಿಮ ಪಟ್ಟಿಯನ್ನು ತಯಾರಿಸಿದ್ದು, ತಮ್ಮ ನಡುವೆ ಇದ್ದ ಗೊಂದಲವನ್ನು ಬಗೆಹರಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿರುವ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಿಗಮ ಮಂಡಳಿ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಲ್ಲಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ “ಲಿಸ್ಟ್ ಕೊಟ್ಟಿದ್ದೇವೆ ಈಗ. ಅವರು ಲಿಸ್ಟ್ ನೋಡಿಕೊಂಡು ಹೇಳ್ತಾರೆ. ಇನ್ನೊಂದೆರಡು ದಿನಗಳಲ್ಲಿ ನೋಡಿ ಹೇಳುತ್ತೇವೆ ಎಂದಿದ್ದಾರೆ” ಎಂದು ಪ್ರತಿಕ್ರಿಯಿಸಿದರು.
“ನಾನು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಮೂರ್ನಾಲ್ಕು ಸಭೆಗಳನ್ನು ಮಾಡಿ ನಮ್ಮ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ಅದಾದ ಬಳಿಕ ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರ ಜತೆ ಕುಳಿತುಕೊಂಡು ಮಾತನಾಡಿ ಸಲ್ಲಿಸಿದ್ದೇವೆ. ಎಐಸಿಸಿ ಅಧ್ಯಕ್ಷರಿಗೂ ತಲುಪಿಸಿ ಮಾತನಾಡಿ ಅಂತ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರ ಗಮನಕ್ಕೂ ತಂದಿದ್ದೇವೆ” ಎಂದು ಡಿಕೆ ಶಿವಕುಮಾರ್ ಹೇಳಿದರು. ಕಾರ್ಯಕರ್ತರಿಗೂ ಸಹ ಅವಕಾಶ ಕೊಡಿ ಅಂತ ಹೇಳಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ “ಮೊದಲಿನಿಂದನೂ ನಾವೇನು ಕಾರ್ಯಕರ್ತರಿಗೆ ಕೊಡಬೇಕು ಅಂತ ಏನಿಲ್ಲ. ಅವರಿಗೂ ಕೊಡಬೇಕಾಗುತ್ತದೆ, ಅದೂ ಗಮನದಲ್ಲಿದೆ. ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ, ಅವರು ತಿಳಿಸುತ್ತಾರೆ” ಎಂದು ಉತ್ತರಿಸಿದರು.