ಬೀದರ್: ಪಕ್ಷದ ಯಾವ ನಾಯಕ ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಒಂದು ಸಲ ಅಧ್ಯಕ್ಷರಾದರೆ ಎಲ್ಲರು ಅವರನ್ನು ಒಪ್ಪಿಕೊಳ್ಳಲೇಬೇಕು ಎಂದು ಶಾಸಕ ಯತ್ನಾಳ್‌ಗೆ ಮಾಜಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂದು(ಡಿ.4) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಪಕ್ಷದಲ್ಲಿ ಪ್ರಸ್ತುತ ದಿನಗಳಲ್ಲಿ ಎರಡು ಬಣಗಳು ಇರಬಹುದು. ಆದರೆ ಎಲ್ಲಾ ಭಿನ್ನಮತಗಳನ್ನು ಮುಂದಿನ ದಿನಗಳಲ್ಲಿ ಹೈಕಮಾಂಡ್ ಸರಿಪಡಿಸುತ್ತದೆ. ಯತ್ನಾಳ್ ವೈಯಕ್ತಿಕವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ಯಾವುದೇ ಶಿಸ್ತು ಕ್ರಮವಾಗಲ್ಲ. ಹೀಗಾಗಿ ಪಕ್ಷದಿಂದ ಉಚ್ಛಾಟನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ಪಕ್ಷ ಈಗ ಎರಡು ಬಣಗಳಾಗಿದ್ದರೂ ರಾಜ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟ ಒಂದೇ ಆಗಿದೆ. ಅಲ್ಲದೇ ಯತ್ನಾಳ್ ಶಿಸ್ತು ಸಮಿತಿ ಮುಂದೆ ನೋಟಿಸ್ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟನೆ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಎರಡು ಬಣಗಳು ಒಂದಾಗುತ್ತದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ದೆಹಲಿಗೆ ತೆರಳಿದ ಆರ್.ಅಶೋಕ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಅಶೋಕ್ ಸೇರಿದಂತೆ ಎಲ್ಲಾ ನಾಯಕರೊಂದಿಗೆ ಭಿನ್ನಮತದ ಬಗ್ಗೆ ಮಾಹಿತಿ ಪಡೆಯುತ್ತಿದೆ. ಹೀಗಾಗಿ ಅಶೋಕ್ ದೆಹಲಿಗೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.