ನವದೆಹಲಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂಬ ಸಚಿವ ಭೈರತಿ ಸುರೇಶ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ಕೌರವರನ್ನು ಶಕುನಿ ಮುಗಿಸಿದ ಹಾಗೇ ಸಿಎಂ ಸಿದ್ದರಾಮಯ್ಯರನ್ನು ಮುಗಿಸಲು ಸಚಿವ ಭೈರತಿ ಸುರೇಶ್ ಪಣತೊಟ್ಟಿದ್ದಾರೆ. ಭೈರತಿ ಸುರೇಶ್ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಪ್ಪು ಮಾಡಿದ್ದಾರೆ. ಆ ಭಯದಿಂದ ನನ್ನ ಮೇಲೆ ಆರೋಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಸುರೇಶ್ ಅವರೇ ಕಾರಣ ಅಂತ ಜನರು ಮಾತನಾಡುತ್ತಿದ್ದಾರೆ. ನಾನು ಆ ಮಾತನ್ನು ಹೇಳಲಾ? ಮಾತಾಡುವ ಮುಂಚೆ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಇವರೇ ಸಿಎಂ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಕಳಂಕ ತಂದಿದ್ದಾರೆ. ಹೀಗಾಗಿರುವ ಭೈರತಿ ಸುರೇಶ್ ನನ್ನ ಬಗ್ಗೆ ಮಾತನಾಡಿ ಕೆಳಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು.





