ಬೆಂಗಳೂರು: ಲಾರಿ ಮಾಲೀಕರ ಸಂಘದ ವತಿಯಿಂದ ಏಪ್ರಿಲ್.15 ರಿಂದ ಡಿಸೇಲ್ ದರ ಏರಿಕೆಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಮಾಡಲಾಗುವುದು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಏಪ್ರಿಲ್.5) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಏಳು ತಿಂಗಳಲ್ಲಿ ಡಿಸೇಲ್ ಬೆಲೆ 5ರೂ. ಏರಿಕೆಯಾಗಿದೆ. ಈ ಬೆಲೆಯಿಂದ ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ ಎಂದರು.
ಡಿಸೇಲ್ ದರ, ಫಿಟ್ನೆಸ್ ಫೀಸ್, ಬಾರ್ಡ್‌ರ್ ಚೆಕ್ ಪೋಸ್ಟ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರವನ್ನು ಏಪ್ರಿಲ್.14ರ ಮಧ್ಯರಾತ್ರಿಯಿಂದಲೇ ಹೋರಾಟ ಪ್ರಾರಂಭ ಮಾಡಲಿದ್ದೇವೆ. ಅಲ್ಲದೇ ಹೋರಾಟ ಶುರುವಾದ ನಂತರ ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲ್ಲ. ಅವುಗಳನ್ನು ಪರೀಕ್ಷಿಸಲು ಚೆಕ್ ಪೋಸ್ಟ್‌ಗಳಲ್ಲಿ ಖುದ್ದು ನಾವುಗಳೇ ನಿಲ್ಲುತ್ತೇವೆ. ಯಾವುದೇ ವಾಣಿಜ್ಯ ವಾಹನಗಳನ್ನು ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನೂ ಈ ಮುಷ್ಕರಕ್ಕೆ ಪೆಟ್ರೋಲ್ ಮಾಲೀಕರು ಬೆಂಬಲ ನೀಡಿದ್ದಾರೆ. ಹೀಗಾಗಿ ಏರ್‌ಪೋರ್ಟ್ ಟ್ಯಾಕ್ಸಿ, ಮರಳು ಲಾರಿ, ಜಲ್ಲಿ ಕಲ್ಲು, ಗೂಡ್ಸ್ ವಾಹನಗಳು, ಪೆಟ್ರೋಲ್ ಮತ್ತು ಡಿಸೇಲ್ ಲಾರಿ ಹಾಗೂ ಅಕ್ಕಿ ಲೋಡ್ ಲಾರಿಗಳನ್ನು ಸಹ ಬಂದ್ ಮಾಡಲಾಗುತ್ತದೆ. ಒಟ್ಟಾರೆ ಎಲ್ಲಾ ಬಗೆಯ ವಾಣಿಜ್ಯ ವಾಹನಗಳು ಸೇರಿದಂತೆ ಒಟ್ಟು 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಿದೆ. ಆದರೆ ಈ ಹೋರಾಟ ನಮ್ಮ ಬೇಡಿಕೆಗಳು ಈಡೇರುವವರೆಗೂ ನಡೆಯುತ್ತದೆ ಎಂದು ತಿಳಿಸಿದರು.



