ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಮೂವರು ಬೆಂಬಲಿಗರ ವಿರುದ್ಧ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಶಾಸಕ ಮುನಿರತ್ನ, ಬೆಂಬಲಿಗರಾದ ವಸಂತ, ಚನ್ನಕೇಶವ, ಕಮಲ್ ಹಾಗೂ ಓರ್ವ ಅಪರಿಚಿತನ ವಿರುದ್ಧವೂ ದೂರು ದಾಖಲಾಗಿದೆ. ಕಳೆದ 2013ರಲ್ಲಿ ಜೆಪಿ ಪಾರ್ಕ್‌ನ ಶಾಸಕರ ಕಚೇರಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ ಎನ್ನಲಾಗ್ತಿದೆ. ಅಪರಿಚಿತ ವ್ಯಕ್ತಿಯಿಂದ ಇಂಜೆಕ್ಷನ್ ತರಿಸಿ ಇಂಜೆಕ್ಟ್ ಮಾಡಿಸಿದ್ದರೆಂದು ದೂರಿನಲ್ಲಿ ದಾಖಲಾಗಿದೆ.
ಅತ್ಯಾಚಾರಕ್ಕೂ ಮುನ್ನ ನೀಡಿದ ಇಂಜೆಕ್ಷನ್‌ನಿಂದ ಈಗ ನನಗೆ ಇಡಿಆರ್ ಎಂಬ ಕಾಯಿಲೆ ಬಂದಿದೆ. ಇದರಿಂದ ಮನನೊಂದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೆ. ಪತಿ ಬಿಟ್ಟು ಹೋಗಿದ್ದರಿಂದ ಮತ್ತೊಬ್ಬರನ್ನು ಮದುವೆ ಆಗಿ ಜೀವನ ನಡೆಸುತ್ತಿದ್ದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಹೊರಿಸಿ ನನ್ನನ್ನು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಅವರ ಬೆಂಬಲಿಗರು ಬಂದು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವ ಆಮಿಷವೊಡ್ಡಿದ್ದರು. ನಂತರ, ಶಾಸಕರ ಕಚೇರಿಗೆ ಕರೆದೊಯ್ದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ತೆ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.





