371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ
ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ ಇದೆ. ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಚರಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದೆ. ಪ್ರತ್ಯೇಕ ಸಚಿವಾಲಯ ಮಾಡುವ ಉದ್ದೇಶ ನಮಗೆ ಇದೆ ಎಂದರು.
ತೊಗರಿ ಪ್ಯಾಕೇಜ್
ತೊಗರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಎನ್ನುವ ಬೇಡಿಕೆ ರೈತರಿಂದ ಇದೆ. ತೊಗರಿ ಬೆಳೆ ಸ್ಥಿತಿ ಗತಿ ಕುರಿತ ವರದಿ ಕೇಳಿದ್ದೇವೆ. ಈ ವರದಿ ಬಂದ ಬಳಿಕ ಆ ಬಗ್ಗೆ ಸೂಕ್ತ. ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಯದೇವ ಮಹತ್ವದ ಹೆಜ್ಜೆ
ಕಲ್ಯಾಣ ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲಿ ಇಂದು ಉದ್ಘಾಟನೆಗೊಳ್ಳಲಿರುವ ಜಯದೇವ ಆಸ್ಪತ್ರೆ ಮಹತ್ವದ್ದು. ರಾಜ್ಯ ಸಭೆ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದ ಫಲವಾಗಿ 371J ಜಾರಿಯಾಗಿದೆ. ಇಲ್ಲಿ 371 ಬೆಡ್ ಗಳ ಆಸ್ಪತ್ರೆಯನ್ನು ಇಂದು ಉದ್ಘಾಟಿಸುತ್ತಿದ್ದೇವೆ ಎಂದರು.
ಸಿ.ಟಿ.ರವಿ ಮಾತು ಕ್ರಿಮಿನಲ್ ಅಪರಾಧ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಬಳಸಿದ ಪದ ಅತ್ಯಂತ ಅನಾಗರಿಕವಾದದ್ದು. ಇದು ಕ್ರಿಮಿನಲ್ ಅಪರಾಧ. ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿ ಆಗಿದ್ದ ರವಿ ಬಾಯಲ್ಲಿ ಇಂಥಾ ಮಾತು ನಾಚಿಕೆಗೇಡಿನದ್ದು. ಇತರೆ ವಿಧಾನ ಪರಿಷತ್ ಸದಸ್ಯರು ರವಿ ಆ ಪದ ಬಳಸಿರುವುದನ್ನು ಕೇಳಿಸಿಕೊಂಡಿದ್ದಾರೆ. ರವಿ ಅತ್ಯಂತ ತುಚ್ಚವಾಗಿ ಮಾತಾಡಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.