Mysore
28
few clouds

Social Media

ಬುಧವಾರ, 14 ಜನವರಿ 2026
Light
Dark

ಹಿರಿಯ ಸಾಹಿತಿ ನಾ.ಡಿಸೋಜಾ ನಿಧನ: ಗಣ್ಯರಿಂದ ಸಂತಾಪ

ಮೈಸೂರು: ಹಿರಿಯ ಸಾಹಿತಿ ನಾ.ಡಿಸೋಜಾ ನಿನ್ನೆ ತಡರಾತ್ರಿ ನಿಧನರಾದ ಹಿನ್ನೆಲೆಯಲ್ಲಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಾಹಿತಿ ನಾ.ಡಿಸೋಜಾ ಅವರು, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು, ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದರು. ಆದರೆ ಅವರು ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ನಿನ್ನೆ(ಜನವರಿ.5) ತಡರಾತ್ರಿ ನಿಧನರಾಗಿದ್ದಾರೆ.

ನಾ.ಡಿಸೋಜಾ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ನಾ.ಡಿಸೋಜಾ ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಕೋರಿದ್ದಾರೆ.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಎಕ್ಸ್‌ ಖಾತೆಯ ಮೂಲಕ ಪೋಸ್ಟ್‌ ಮಾಡಿದ್ದು, ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಹೆಸರು, ಬಹುಮುಖ ಪ್ರತಿಭೆಯ ಬರಹಗಾರರು ಆಗಿದ್ದ ಡಾ.ನಾ ಡಿಸೋಜ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆರು ದಶಕಗಳ ಕಾಲ ಕನ್ನಡ ಸಾಹಿತ್ಯಸಿರಿಯನ್ನು ಶ್ರೀಮಂತಗೊಳಿಸಿದ ಶ್ರೀಯುತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಅನೇಕ ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಮಂಜಿನ ಕಾನು, ಈ ನೆಲ ಈ ಜಲ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನಮ್ಮ ಚೆನ್ನಮ್ಮಾಜಿ, ಒಡ್ಡು ಸೇರಿ 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದ್ದಾರೆ.

ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಎಕ್ಸ್‌ ಖಾತೆಯ ಮೂಲಕ ಸಂತಾಪ ಸೂಚಿಸಿದ್ದು, ಖ್ಯಾತ ಕನ್ನಡ ಸಾಹಿತಿ ಡಾ. ನಾ.ಡಿಸೋಜಾ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ವೇದನೆಯಾಯಿತು. ಸರಳ ಸಜ್ಜನಿಕೆಯ ಬಹುಮುಖ ಪ್ರತಿಭೆಯ ಡಿಸೋಜಾ ಅವರು ಕನ್ನಡ ನಾಡು ಕಂಡ ಅಪರೂಪದ ಸಾಹಿತಿಯಾಗಿದ್ದರು. ಮಲೆನಾಡಿನ ಸೊಬಗನ್ನು ಮೈಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಶೈಲಿಯಿಂದ ಸರ್ವಜನರ ಹೃದಯವನ್ನು ತಟ್ಟಿ ಸಾಹಿತ್ಯ ಪ್ರೇಮಿಗಳಿಗೆ ಹಾಗೂ ಸಾಹಿತ್ಯದ ವಿದ್ಯಾರ್ಥಿಗಳಿಗೆ ಆದರ್ಶದ ಬೆಳಕಾಗಿದ್ದ ಅವರು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿದ ಕನ್ನಡ ವಾಗ್ದೇವಿಯ ಸುಪುತ್ರರಾಗಿದ್ದರು ಎಂದು ತಿಳಿಸಿದ್ದಾರೆ.

ನಾಡು ಮೆಚ್ಚಿದ ಜನಮೆಚ್ಚಿದ ಸಾಹಿತಿಯಾಗಿ ನೈಜ ವೈಚಾರಿಕ ಪ್ರಜ್ಞೆಯ ಚಿಂತಕರಾಗಿ ಸರ್ವಧರ್ಮ ಸಮಭಾವದ ಪ್ರತಿಪಾದಕರಾಗಿ, ವಿಶ್ವಮಾನವತ್ವ ಮೈಗೂಡಿಸಿಕೊಂಡು ದಾರ್ಶನಿಕ ಸಾಹಿತಿಯಾಗಿದ್ದ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಸರ ಕಾಳಜಿ, ಕನ್ನಡ ಕಳಕಳಿ ಅವರ ಆದ್ಯತೆಯಾಗಿತ್ತು, ತಮ್ಮ ಸಾಹಿತ್ಯದ ಮೂಲಕ ಸಾಮಾಜಿಕ ವ್ಯವಸ್ಥೆಗೆ ಚಿಕಿತ್ಸೆ ನೀಡಬೇಕೆನ್ನುವುದು ಅವರ ಅಭಿಲಾಷೆಯಾಗಿತ್ತು, ಈ ನಿಟ್ಟಿನಲ್ಲಿ ಅವರು ಇಟ್ಟ ಹೆಜ್ಜೆ ಗುರುತುಗಳು ಕನ್ನಡ ಸಾಹಿತ್ಯ ಪ್ರಪಂಚ ಇರುವವರಿಗೆ ಅಜರಾಮರ. ಅವರ ಅಗಲಿಕೆಯಿಂದ ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗದವರಿಗೆ ಉಂಟಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

 

Tags:
error: Content is protected !!