Mysore
18
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ: ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭದ್ರತಾ ಲೋಪದ ಆರೋಪ ಕಂಡು ಬಂದಿದೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಸಂವಿಧಾನದ ಆಶಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಲ್ಲಿ ಏಕಕಾಲಕ್ಕೆ ಬೀದರ್‌ನಿಂದ ಚಾಮರಾಜನಗರದವರೆಗೆ ಹಮ್ಮಿಕೊಳ್ಳಲಾಗಿದ್ದ ಸುಮಾರು ೨,೫೦೦ ಕಿ.ಮೀ. ಬೃಹತ್‌ ಮಾನವ ಸರಪಳಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ನಗಾರಿ ಬಾರಿಸುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವಕನೊಬ್ಬ ಏಕಾಏಕಿ ಕೇಸರಿ ಶಾಲು ಹಿಡಿದು ಸಿಎಂ ಸಿದ್ದರಾಮಯ್ಯ ಕುಳಿತಿದ್ದ ವೇದಿಕೆಯ ಬಳಿ ಮೆಟ್ಟಿಲುಗಳ ಮೂಲಕ ನುಗ್ಗಿದ್ದಾನೆ.

ಆ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆದು ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಯುವಕನನ್ನು ಮಹದೇವ್‌ ನಾಯಕ ಎಂದು ಗುರುತಿಸಲಾಗಿದೆ.

ಕಳೆದ ಒಂದು ವಾರದಿಂದ ಸಿಎಂ ಸಿದ್ದರಾಮಯ್ಯ ಅವರ ಭೇಟಿಗೆ ಆ ಯುವಕ ಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಸಿಎಂ ಸಿದ್ದರಾಮಯ್ಯರ ಮೇಲಿನ ಪ್ರೀತಿಯಿಂದ ಇಂದು ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಮಧ್ಯೆ ಸೇರಿಕೊಂಡು, ಆ ನಂತರ ಅವರಿಗೆ ಶಾಲು ಹೊದಿಸಲು ಬಂದಿದ್ದ ಎಂದು ಕೆಲವು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂಧಿತ ಯುವಕನನ್ನು ವಿಧಾನಸೌಧ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈತ ಮೂಲತಃ ಉತ್ತರ ಕರ್ನಾಟಕದವನಾಗಿದ್ದು, ಪ್ರಸ್ತುತ ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

 

 

Tags:
error: Content is protected !!