ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 5.46,698 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ಪೈಕಿ 2,32,928 ಬಾಲಕರು, 3,13,770 ಮಂದಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮಕ್ಕಳಿಗೆ ಫಲಿತಾಂಶ ಮೊದಲು ಕೊಡಬೇಕು ಅಂತಲೇ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ ಮಾಡಿದ್ದೇವೆ. ಅಂಕಪಟ್ಟಿ ಕೂಡ ಇಂದೇ ಲಭ್ಯವಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 86.48% ಫಲಿತಾಂಶ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು, ಯಾದಗಿರಿಗೆ ಕೊನೆಯ ಸ್ಥಾನ ಬಂದಿದೆ.
ಕೊಡಗು ಜಿಲ್ಲೆಗೆ ಮೂರನೇ ಸ್ಥಾನ ಬಂದಿದ್ದು, ಮಂಡ್ಯಕ್ಕೆ 12ನೇ ಸ್ಥಾನ ಲಭಿಸಿದೆ. ಮೈಸೂರು ಜಿಲ್ಲೆಗೆ 18ನೇ ಸ್ಥಾನ ಲಭಿಸಿದ್ದು, ಚಾಮರಾಜನಗರ ಜಿಲ್ಲೆಗೆ 19ನೇ ಸ್ಥಾನ ಸಿಕ್ಕಿದೆ.




