ಬೆಂಗಳೂರು: ಸಾರ್ವಜನಿಕರಿಂದ ಮುಡಾ ಪ್ರಕರಣವನ್ನು ದಿಕ್ಕು ತಪ್ಪಿಸಲು ಹಿಂದುತ್ವವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ರಾಜ್ಯ ಸರ್ಕಾರ ಗುರಿಯಾಗಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀರುಗೇಟು ನೀಡಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಅಕ್ಟೋಬರ್ 2 ರಂದು ವಿನಾಯಕ ದಾಮೋದರ್ ಸಾವರ್ಕರ್‌ರವರು ಗೋಹತ್ಯೆಯನ್ನು ವಿರೋಧಿಸಲಿಲ್ಲ. ಬದಲಾಗಿ ಅವರು ಮಾಂಸವನ್ನು ಸೇವಿಸುತ್ತಿದ್ದರು ಎಂದು ಹೇಳಿದ್ದರು.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಇದು ನಮ್ಮ ರಾಷ್ಟ್ರನಾಯಕರಿಗೆ ಮಾಡಿದ ದ್ರೋಹ! ಕೇವಲ ಅಧಿಕಾರದ ದುರಾಸೆಯಿಂದ ಇಂದಿನ ಕಾಂಗ್ರೆಸ್ ಸರ್ಕಾರ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ದೇಶಭಕ್ತ ವೀರ್ ಸಾವರ್ಕರ್ ಅವರನ್ನು ಗುರಿಯಾಗಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೇವಲ ಮುಡಾ ಪ್ರಕರಣದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸಾವರ್ಕರ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಇದೊಂದು ಹೇಳಿಕೆ ಜನರ ದಾರಿ ತಪ್ಪಿಸುವ ತಂತ್ರವಾಗಿದೆ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಸರ್ಕಾರದ ಭ್ರಷ್ಟಾನಾಯಕರನ್ನು ಹೊಣೆಗಾರರನ್ನಾಗಿ ಮಾಡುವವರೆಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.