ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಚಿಸಿದೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯ ಲೆಹರ್ಸಿಂಗ್ ಸಿರೋಯಾ ಅವರ ಪ್ರಶ್ನೆಯೊಂದಕ್ಕೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕರ್ನಾಟಕದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪ್ರಾಯೋಗಿಕವಾಗಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಎನ್ಎಸ್ಎಸ್ ಆಧಾರಿತ ತಡೆರಹಿತ ಟೋಲಿಂಗ್‌ನಂತಹ ಹೊಸ ತಂತ್ರಜ್ಞಾನಗಳ ಅನುಷ್ಠಾನದ ಕುರಿತು ಸಲಹೆಗಳನ್ನು ನೀಡಲು ಸರ್ಕಾರವು ಸಲಹೆಗಾರರನ್ನು ನೇಮಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಎಷ್ಟು ಸಂಚರಿಸಿದೆ ಎಂಬುದರ ಮಾಹಿತಿ ಕಲೆ ಹಾಕಲು ಮತ್ತು ಪ್ರಯಾಣಿಸಿದ ದೂರದ ಆಧಾರದ ಮೇಲೆ ಬಳಕೆದಾರರ ಶುಲ್ಕವನ್ನು ಲೆಕ್ಕಾಚಾರ ಮಾಡುವ ಸಾಮರ್ಥ್ಯವನ್ನು ಜಿಎನ್ಎಸ್ಎಸ್ ಹೊಂದಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಈ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಮೂರು ವರ್ಷಗಳಿಂದ ಚಿಂತನೆ ನಡೆಸುತ್ತಾ ಇದೆ. ಇದು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವುದಲ್ಲದೆ, ಟೋಲ್ ಪಾವತಿಗಾಗಿ ಸರದಿಯಲ್ಲಿ ಕಾಯುವುದನ್ನು ತಪ್ಪಿಸುತ್ತದೆ ಎಂದು ಫೆಬ್ರವರಿ 7ರಂದು ಗಡ್ಕರಿ ಹೇಳಿದ್ದರು.