ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಬಹಿರಂಗವಾಗಿ ವಾರ್ನಿಂಗ್ ನೀಡಿದ್ದರು, ಆದರೆ ಇದೀಗ ಸ್ಯಾಂಡಲ್‌ವುಡ್ ಫಿಲ್ಮ್ಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಟಾಂಗ್ ನೀಡಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಇಂದು(ಮಾರ್ಚ್.2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸರಿಯೆಂದು ಅಥವಾ ತಪ್ಪೆಂದು ಹೇಳೋಕೆ ಆಗಲ್ಲ. ಆದರೆ ಕಲಾವಿದ ನಟ್ಟು, ಬೋಲ್ಟ್ ಸರಿ ಮಾಡುತ್ತೇವೆ ಎನ್ನುವ ಪದ ಬಳಕೆಯನ್ನು ಅಧಿಕಾರ ದರ್ಪದಿಂದ ಹೇಳಿರಬಹುದು. ಈ ವಿಚಾರದಲ್ಲಿ ನಮ್ಮದು ಕೂಡ ತಪ್ಪಾಗಿದೆ. ನಮ್ಮ ಮನೆಯ ಹಬ್ಬಕ್ಕೆ ಕಲಾವಿದರು ಬರಬೇಕಿತ್ತು. ಆದರೆ ನಮ್ಮ ಕಲಾವಿದರು ಆಮಂತ್ರಣ ಸಿಕ್ಕಿಲ್ಲ, ಈ ಕಾರಣಕ್ಕೆ ಅವರು ಬಂದಿಲ್ಲವೆಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಿನಿಮಾಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ಪ್ರತ್ಯೇಕ ನಿಯಮ ಇರುತ್ತದೆ. ಹಾಗಾಗಿ ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಲ್ಲ ಎಂಬ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ ಎಂದು ತಿರುಗೇಟು ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಏನು?
ಶನಿವಾರ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಯ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಸಿನಿಮಾಗೆ ಯಾವುದೇ ಎಲ್ಲೆ ಇಲ್ಲ. ಎಲ್ಲಿ ಬೇಕಾದರೂ ಬೆಳೆಯಬಹುದು. ನೀವೆಲ್ಲ ಬಣ್ಣ ಹಾಕಿಕೊಂಡು ಸಿನಿಮಾ ಮಾಡುತ್ತಿರಾ, ಆದರೆ ನಾವು ಬಣ್ಣ ಹಾಕದೇ ಸಿನಿಮಾ ಮಾಡುತ್ತೇವೆ ಅಷ್ಟೇ ಎಂದು ರಾಜಕೀಯಕ್ಕೆ ಹೋಲಿಕೆ ಮಾಡಿ ಹೇಳಿದ್ದರು.
ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟ ಮತ್ತು ನಟಿಯರ ಬಗ್ಗೆ ಬಹಳ ಕೋಪ ಬಂದಿದೆ. ಏಕೆಂದರೆ, ಕೋವಿಡ್ ಮುಗಿದ ಸಮಯದಲ್ಲಿ ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಹಮ್ಮಿಕೊಂಡಿದ್ದೆವು. ಅಲ್ಲದೇ ನಮ್ಮ ರಾಜ್ಯದ ಜನತೆಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿದ್ದೆವು. ಆದರೆ ಆ ಸಂದರ್ಭದಲ್ಲಿ ಯಾವ ನಟ ಮತ್ತು ನಟಿಯರು ಕೂಡ ನಮಗೆ ಬೆಂಬಲ ನೀಡಲಿಲ್ಲ. ಹೀಗಾಗಿ ನಮ್ಮ ರಾಜ್ಯ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಲಿಲ್ಲ ಅಂದರೆ ಶೂಟಿಂಗ್ ಮಾಡೋಕೆ ಆಗಲ್ಲ. ಯಾರು ಯಾರಿಗೆ ನಟ್ಟು, ಬೋಲ್ಟು ಸರಿಮಾಡಬೇಕೆಂದು ನನಗೆ ತಿಳಿದಿದೆ ಎಂದು ಬಹಿರಂಗವಾಗಿ ವಾರ್ನಿಂಗ್ ನೀಡಿದ್ದರು.





