ಬೆಳಗಾವಿ: ಬಿಜೆಪಿಯ ಒಂದಷ್ಟು ನಾಯಕರು ರಾತ್ರಿ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗುತ್ತಾರೆ. ಆದರೆ ನಾನು ಮಾತ್ರ ಬೆಳಿಗ್ಗೆ ವೇಳೆ ಭೇಟಿಯಾಗುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು(ಡಿ.9) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ನೇರವಾಗಿ ನನ್ನ ಹೆಸರು ಹೇಳದೆ ಆ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ನಾನು ಡಿ.ಕೆ.ಶಿವಕುಮಾರ್ ಅವರನ್ನು ರಾತ್ರಿ ವೇಳೆ ಭೇಟಿಯಾಗಿಲ್ಲ. ಬೆಳಿಗ್ಗಿನ ವೇಳೆಯೇ ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ನಾನು ನನ್ನ ವಿಧಾನಸಭಾ ಕ್ಷೇತ್ರದ ಸಲುವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಈ ವಿಚಾರವಾಗಿ ನನ್ನ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಕ್ರಮ ಕೈಗೊಳ್ಳುವಂತೆ ಹೇಳಿದವರಿಗೆ ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲಿ. ಈ ಬಗ್ಗೆ ಕೋರ್ ಕಮಿಟಿ ನನ್ನ ವಿರುದ್ಧ ಯಾವುದೇ ಕ್ರಮ ಜರುಗಿಸಿದರು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.




