ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ಒಕ್ಕಲಿಗ ಸಂಪ್ರದಾಯದಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಸೋಮನಹಳ್ಳಿ ಗ್ರಾಮದಲ್ಲಿ ಇಂದು(ಡಿ.11) ಸಂಜೆ ಸುಮಾರು 5.30 ಗಂಟೆಯ ವೇಳೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಮುಂದೆ ರಾಷ್ಟ್ರಗೀತೆ ನುಡಿಸಿ, ಮೂರು ಸುತ್ತು ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಸಿದ್ಧತೆಗಳೊಂದಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಎಸ್‌ಎಂಕೆ ಅವರ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಪತ್ನಿ ಪ್ರೇಮಾ ಅವರಿಗೆ ಹಸ್ತಾಂತರಿಸಿದರು.
ಪುರೋಹಿತರಾದ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಒಕ್ಕಲಿಗ ಸಂಪ್ರದಾಯದಂತೆ ವಿಧಿ-ವಿಧಾನ ಕಾರ್ಯಗಳನ್ನು ನೆರವೇರಿಸಲಾಯಿತು. ಈ ವೇಳೆ ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ, ಮಕ್ಕಳು, ಮೊಮ್ಮಕ್ಕಳು, ಬಂಧು ಬಳಗದವರು, ಕುಟುಂಬಸ್ಥರು ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಪೂಜೆ ಸಲ್ಲಿಸಿದರು. ಬಳಿಕ ಮೊಮ್ಮಗ ಅಮರ್ತ್ಯ ಸಿದ್ದಾರ್ಥ ಹೆಗ್ಡೆ ಹಾಗೂ ಸೋದರ ಮಗ ಗುರುಚರಣ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅಂತ್ಯಕ್ರಿಯೆಯಲ್ಲಿ ಗಣ್ಯಾತಿಗಣ್ಯರು ಭಾಗಿ:
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಭಾಪತಿ ಯು.ಟಿ.ಖಾದರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಸಂಪುಟ ಸಚಿವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಎಲ್ಲಾ ಪಕ್ಷಗಳ
ಮಾಜಿ ಸಚಿವರು, ಮಾಜಿ ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷದ ಮುಖಂಡರು, ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.