Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಉಗ್ರಾಣ ನಿಗಮದ ಅಧ್ಯಕ್ಷ ಎಸ್‌.ಜಯಣ್ಣ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಬೆಂಗಳೂರು: ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಜಯಣ್ಣ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಎಸ್‌.ಜಯಣ್ಣ ಅವರ ನಿಧನ ಕುರಿತು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕೊಳ್ಳೇಗಾಲದ ಮಾಜಿ ಶಾಸಕರು, ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರ ನಿಧನ ನೋವುಂಟು ಮಾಡಿದೆ. ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಜಯಣ್ಣ ಅವರ ಸಾವಿನ ಸುದ್ದಿ ಮತ್ತೊಂದು ಆಘಾತ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಯಣ್ಣ ನನ್ನ ಆತ್ಮೀಯರಾಗಿದ್ದು, ನಮ್ಮ ನಡುವೆ ದೀರ್ಘಕಾಲದ ಒಡನಾಟವಿತ್ತು. 1994 ರಲ್ಲಿ ಜೆಡಿಎಸ್‌ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದರು. ಅಲ್ಲದೇ ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ್ದ ಜಯಣ್ಣ ಜನಪ್ರಿಯ ಶಾಸಕರಾಗಿದ್ದರು ಎಂದಿದ್ದಾರೆ.

ನಾನು ಡಿಸೆಂಬರ್‌ 7 ರಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಜೊತೆಗಿದ್ದರು. ಅವರ ಮನೆಯಲ್ಲಿಯೇ ಊಟ ಮಾಡಿ ಬಂದಿದ್ದೆ. ಜಯಣ್ಣ ಅವರ ಸಾವು ವೈಯಕ್ತಿಕವಾಗಿ ನನಗೆ ಆಘಾತ ತಂದಿದೆ. ಅವರ ನಿಧನದಿಂದ ಜನಪ್ರಿಯ ರಾಜಕಾರಣಿಯನ್ನು ನಾಡು ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.

ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Tags: