ಬೆಳಗಾವಿ: ಚಳಿಗಾಳದ ಅಧಿವೇಶನ ಸಂದರ್ಭದಲ್ಲಿ ಪಂಚಮಶಾಲಿಗಳು ತಮ್ಮ ಮೀಸಲಾತಿಗಾಗಿ ಸುವರ್ಣ ಸೌಧದ ಹತ್ತಿರ ಹೋರಾಟ ಮಾಡುವಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಇದಕ್ಕಾಗಿ ಕಾಂಗ್ರೆಸ್ ಸರ್ಕಾರವು ಲಾಠಿ ಬೀಸಿದ ಪೊಲೀಸರಿಗೆ ಬಹುಮಾನ ಘೋಷಿಸಿದೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಪಂಚಮಶಾಲಿ ಸಮುದಾಯ ತನ್ನ ಪಾಲಿನ ಮೀಸಲಾತಿ ಪಡೆಯಲು ಪ್ರತಿಭಟನೆ ನಡೆಸುತ್ತಿರುವ ವೇಳೆ ಪೊಲೀಸರ ಮುಖಾಂತರ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಟ್ಲರ್ ಸರ್ಕಾರದ ರೀತಿ ವಿಕೃತಿ ಮೆರೆದಿದೆ. ಪ್ರತಿಭಟನೆಯಲ್ಲಿ ಪಂಚಮಶಾಲಿ ಹೋರಾಟಗಾರರ ಮೇಲೆ ಲಾಠಿ ಬೀಸಿ ರಕ್ತ ಹರಿಸಿದ್ದಕ್ಕೆ ಬೆಳಗಾವಿ ನಗರದ ಪೊಲೀಸ್ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ್ ಅವರಿಗೆ ಉತ್ತಮ ಕರ್ತವ್ಯ ನಿರ್ವಹಣೆ ಆಧಾರದಲ್ಲಿ 10,000 ರೂ. ಬಹುಮಾನ ಘೋಷಿಸಿದೆ ಎಂದು ಆರೋಪಿಸಿದೆ.
ಇನ್ನು ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರೇ ಪಂಚಮಶಾಲಿಗಳ ಮೇಲೆ ಅಮಾನುಷವಾಗಿ ಲಾಠಿಚಾರ್ಜ್ ಮಾಡಿಸಿದಿರಿ. ನಿಮ್ಮ ಸರ್ಕಾರದ ಪರವಾಗಿರುವ ಗೂಂಡಾಗಳು ಸುವರ್ಣಸೌಧದೊಳಕ್ಕೆ ನುಗ್ಗಿ ಒಬ್ಬ ವಿಧಾನಪರಿಷತ್ ಸದಸ್ಯನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಇದು ನಿಮ್ಮ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮವೋ ಅಥವಾ ನಿಮ್ಮ ಇಲಾಖೆಯ ಭದ್ರತಾ ವೈಫಲ್ಯವೋ. ಯಾರನ್ನು ಮೆಚ್ಚಿಸಲು ಈ ಬಹುಮಾನ ಘೋಷಿಸಿದ್ದೀರಾ? ಎಂದು ಜೆಡಿಎಸ್ ಪ್ರಶ್ನಿಸಿದೆ.