Mysore
22
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಅಲ್ಪಸಂಖ್ಯಾತರಿಗೆ ಗುತ್ತಿಗೆ ಕಾಮಗಾರಿ ಮೀಸಲಾತಿ ; ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ʻಬಿವೈವಿʼ

ಬೆಂಗಳೂರು : ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ, ಇದನ್ನು ಸಮಗ್ರ ಕರ್ನಾಟಕದ ಸರ್ವ ಜನರ ಆಶಯ ಹಾಗೂ ಹಿತಾಸಕ್ತಿಗೆ ಪೂರಕವಾಗಿ ನಾವು ಉಭಯ ಸದನಗಳಲ್ಲೂ ಗುತ್ತಿಗೆ ಕಾಮಗಾರಿ ಮೀಸಲಾತಿ ನಿರ್ಣಯವನ್ನು ವಿರೋಧಿಸಿ ಹೋರಾಡುತ್ತೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಬಗ್ಗದಿದ್ದರೆ ಜನರ ಮುಂದೆ ಈ ಹೋರಾಟವನ್ನು ಕೊಂಡೊಯ್ಯುತ್ತೇವೆ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿರುವ ಅವರು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ತತ್ವಕ್ಕೆ ಬಿಜೆಪಿ ಸದಾ ಬದ್ಧವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ “ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು” ಎಂಬ ನೀತಿ ಅನುಸರಿಸಲು ಹೊರಟು ಕುವೆಂಪು ಅವರು ಕಲ್ಪಿಸಿದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಅಪಚಾರವಾದರೂ ಸರಿ ನಾವು ಅಧಿಕಾರ ದಲ್ಲುಳಿಯಲು ಮುಸ್ಲಿಂ ಸಮುದಾಯವನ್ನು ಓಲೈಸುವುದೇ ನಮ್ಮ ಹೆಗ್ಗುರಿ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಬಂದುಬಿಟ್ಟಿದೆ. ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿ ಹಂಚುವಲ್ಲಿಯೂ ಶೇ.4 ಮೀಸಲಾತಿ ನಿಗದಿಪಡಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸಿ, ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರಿಗಷ್ಟೇ ಮೀಸಲಾತಿ ನಿಗದಿಯಾಗಿದ್ದರೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿ ಅಲ್ಪ ಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವಲ್ಲ, ಕ್ರೈಸ್ತರು, ಜೈನ, ಪಾರ್ಸಿ, ಸಿಖ್ ಹೀಗೆ ಎಲ್ಲರೂ ಸೇರುತ್ತಾರೆ ಎಂದು ಹೇಳಿದ್ದಾರೆ. ಇದು ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತೆ’ ಎಂಬಂತೆ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ.

ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರೂ ಸೇರಿದಂತೆ ಇತರ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರಿಗೂ ಸಮಾನವಾಗಿ ಹಕ್ಕು, ಸವಲತ್ತುಗಳು ಹಂಚಿಕೆಯಾಗಬೇಕು, ಆದರೆ ಸಾಮಾಜಿಕ ನ್ಯಾಯದ ಬಗ್ಗೆ ಬೊಬ್ಬೆ ಹೊಡೆಯುವ ಕಾಂಗ್ರೆಸ್ ತನ್ನ ಆಡಳಿತದ ರಾಜ್ಯ ಸರ್ಕಾರದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯವನ್ನು ಮೆಟ್ಟಿ ನಿಂತು ಮುಸ್ಲಿಂ ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವುದು ಸಂವಿಧಾನಕ್ಕೆ ದ್ರೋಹ ಬಗೆದಂತಾಗಿದೆ ಎಂದು ಟೀಕಿಸಿದ್ದಾರೆ.

ಪ್ರಗತಿಪರರೆಂದು ಸ್ವಯಂ ಬಿಂಬಿಸಿಕೊಂಡು ಕಾಂಗ್ರೆಸ್ ಓಲೈಸುವ ಚಿಂತಕರು, ಸಾಹಿತಿಗಳು ಇಂತಹ ಸಾಮಾಜಿಕ ಅನ್ಯಾಯ ಹಾಗೂ ಸಾಮರಸ್ಯ ಕದಡುವ ಸರ್ಕಾರದ ನಿಲುವನ್ನು ನೋಡಿಯೂ ಕಣ್ಣು, ಕಿವಿ ಮುಚ್ಚಿಕೊಂಡಿದ್ದಾರೆ. ಇವರ ದೃತರಾಷ್ಟ್ರ ಧೋರಣೆ ನಮ್ಮದೇನಿದ್ದರೂ ಕಾಂಗ್ರೆಸ್ ಪರವಾದ ನಿಲುವನ್ನು ಪ್ರತಿಪಾದಿಸುವುದು ಮಾತ್ರ , ಇದೆ ನಮ್ಮ ಪ್ರಗತಿಪರ ಚಿಂತನೆ ಹಾಗೂ ಹೋರಾಟ ಎಂದು ತಮ್ಮ ಅಸಲಿ ಮುಖವಾಡವನ್ನು ಅನಾವರಣ ಮಾಡಿಕೊಂಡಿದ್ದಾರೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.

Tags:
error: Content is protected !!