ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು ಕಳೆದಿದ್ದು, ಪೊಲೀಸ್ ಸಿಬ್ಬಂದಿ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಜವಾಬ್ದಾರಿ ವಹಿಸಿದ್ದಾರೆ. ತನಿಖೆಯ ವಿಚಾರವಾಗಿ ಎಲ್ಲಿಯೂ ಕೂಡ ಪೊಲೀಸರು ಕಿಂಚಿತ್ತೂ ರಾಜಿಯಾಗಿಲ್ಲ. ತನಿಖೆಯ ಅವಧಿಯಲ್ಲಿ ನೂರಾರು ಸಾಕ್ಷ್ಯಗಳನ್ನು ಕಲೆಹಾಕಿ ಸಾವಿರಾರು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಕಮಿಷನರ್ ದಯಾನಂದ್ ಹಾಗೂ ಡಿಸಿಪಿ ಗಿರೀಶ್ ನೇತೃತ್ವದ ತಂಡವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ತನಿಖೆ ಮಾಡಿರುವುದಕ್ಕೆ ಅಷ್ಟೊಂದು ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದು ಪ್ರಮುಖ ಸಾಕ್ಷಿಯಾಗಿದೆ.
ತನಿಖಾ ಹಂತದಲ್ಲಿ ಒಂದು ವೇಳೆ ಯಾಮಾರಿದ್ದರೆ ಪೊಲೀಸರಿಗೆ ಯಾವುದೇ ಪ್ರಮುಖ ಸಾಕ್ಷ್ಯಗಳು ಸಿಗುತ್ತಿರಲಿಲ್ಲ. ದರ್ಶನ್ ಅಂಡ್ ಗ್ಯಾಂಗ್ ವಿಚಾರದಲ್ಲಿ ತೆಗದುಕೊಂಡ ನಿರ್ಧಾರ ಪೊಲೀಸ್ ಹಾಗೂ ಕಾನೂನಿನ ಮೇಲೆ ಜನರಲ್ಲಿ ಅತೀ ಹೆಚ್ಚು ನಂಬಿಕೆ ಹುಟ್ಟಿಸಿದೆ.
ಡಿ ಗ್ಯಾಂಗ್ ಬಂಧನದ ಬಳಿಕ ಪೊಲೀಸರಿಗೆ ಸಾಕಷ್ಟು ಒತ್ತಡವಿದ್ದರೂ ಯಾವುದಕ್ಕೂ ಬಗ್ಗದ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದು, ಪೊಲೀಸರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಶಹಬ್ಬಾಸ್ ಎಂದಿದ್ದಾರೆ.





